5 ವರ್ಶದಲ್ಲಿ 1417 ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ಬಿಬಿಎಂಪಿ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

shivaraj

ಬೆಂಗಳೂರು, ಜೂ.20- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳಲ್ಲಿ ವಿವಿಧ ಮೂಲಗಳಿಂದ 1417 ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‍ಲೈನ್, ಚಲನ್ ಮೂಲಕ 1417 ಕೋಟಿ ಸಂಗ್ರಹಿಸಲಾಗಿದೆ. ಆನ್‍ಲೈನ್ ಮೂಲಕ 423 ಕೋಟಿ, ಚಲನ್ ಮೂಲಕ 986 ಕೋಟಿ, ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ 1.63 ಕೋಟಿ, ಚೆಕ್‍ಗಳ ರಿಯಲೈಸೇಷನ್ ಮೂಲಕ 29 ಕೋಟಿ ಸೇರಿದಂತೆ ಸುಮಾರು 1444 ಕೋಟಿ ರೂ.ಗಳನ್ನು ಜೂನ್ 20ಕ್ಕೆ ಅಂತ್ಯಗೊಂಡಂತೆ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಅವರು ವಿವರಗಳನ್ನು ನೀಡಿದರು.

19ಕ್ಕೂ ಹೆಚ್ಚು ಆಸ್ತಿಗಳನ್ನು ಜಿಐಎಸ್ ವ್ಯಾಪ್ತಿಗೆ ತರಲಾಗಿದ್ದು, 18.35 ಲಕ್ಷ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಲ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗುವುದು. ಇದರಿಂದ ಸಂಪನ್ಮೂಲದ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ ಎಂದು ಅವರು ಹೇಳಿದರು. 2017-18ನೆ ಸಾಲಿನಲ್ಲಿ ನೂರಕ್ಕೂ ಹೆಚ್ಚು ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ಮಾಡಿದ್ದು, ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಸಂಬಂಧಿಸಿದಂತೆ 180 ಕೋಟಿಗೂ ಹೆಚ್ಚಿನ ಆದಾಯ ಗುರುತಿಸಿದೆ. ದಂಡ ಮತ್ತು ಬಡ್ಡಿ ಸೇರಿ 559 ಕೋಟಿ ವಸೂಲು ಮಾಡಲು ತೀರ್ಮಾನಿಸಲಾಗಿದೆ.

ಟೋಟಲ್ ಸ್ಟೇಷನ್ ಸರ್ವೆ ಪರಿಣಾಮ ಎಸ್‍ಜೆಆರ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ., ಇನ್‍ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿ., ಐಟಿಪಿಎಲ್, ಎಲ್‍ಎಕ್ಸ್‍ಆರ್ ಎಂಟರ್‍ಪ್ರೈಸಸ್, ಎಸ್‍ಎಪಿ ಲ್ಯಾಪ್ಸ್ ಸೇರಿದಂತೆ ಹತ್ತು ಪ್ರಾಪರ್ಟಿಗಳಿಂದ 63 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿದೆ.  2018-19ನೆ ಸಾಲಿನಲ್ಲಿ ಎಂಟು ವಲಯಗಳಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿರುವ ಪ್ರತಿ ವಲಯದ ನೂರು ಆಸ್ತಿಗಳನ್ನು ಗುರುತಿಸಿ, 800 ಆಸ್ತಿಗಳನ್ನು ಟೋಟಲ್ ಸರ್ವೆ ಮಾಡಿಸಿ ವರ್ಷಕ್ಕೆ ಸುಮಾರು 300 ಕೋಟಿ ರೂ. ವರಮಾನ ನಿರೀಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.

ಟಾಪ್-10 ತೆರಿಗೆ ವಂಚಕರ ಪಟ್ಟಿ: ಟಾಪ್-10 ತೆರಿಗೆ ವಂಚಕರ ಪಟ್ಟಿಯಲ್ಲಿ ಎಂಎಫ್‍ಆರ್ ಡೆವಲಪ್ ಪ್ರೈ.ಲಿ. ಯಲಹಂಕ, ಗಲ್ಫ್ ಆಯಿಲ್ ಕಾಪೆರ್Çರೇಷನ್ ಯಲಹಂಕ, ತಂಗಲಿನ್ ಡೆವಲಪ್‍ಮೆಂಟ್ ಲಿ. ಆರ್‍ಆರ್ ನಗರ, ಟೋಟಲ್ ಮಾಲ್ ಮಹದೇವಪುರ, ಟ್ಯಾಗ್‍ಲಿನ್ ಡೆವಲಪ್‍ಮೆಂಟ್ ಲಿ. ಆರ್‍ಆರ್ ನಗರ, ಅಮಾಲ್ಗಮೇಟೆಡ್ ಕಾಫಿ ಟ್ರೇಡಿಂಗ್ ಕಂಪೆನಿ ವಿಠ್ಠಲ್‍ಮಲ್ಯ ರೋಡ್, ಯಶೋಧ ಮೆಡಿಕೇರ್ ಅಂಡ್ ರಿಸರ್ಚ್ ಸೆಂಟರ್ ಮಹದೇವಪುರ, ಆಸ್ಟ್ರಾಜಿಂಕಾ ಪ್ರೈ.ಲಿ. ಯಲಹಂಕ, ಬ್ರಿಗೇಡ್ ಎಂಟರ್‍ಪ್ರೈಸಸ್ ಪ್ರೈ.ಲಿ. ಸುಬ್ರಹ್ಮಣ್ಯನಗರ, ಮಾನ್ಯತಾ ಪ್ರಾಜೆಕ್ಟ್ಸ್ ಪ್ರೈ.ಲಿ. ಯಲಹಂಕ ಇವುಗಳು ಪಟ್ಟಿಯಲ್ಲಿದ್ದು, ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬಿಜೆಪಿ ಆಡಳಿತಾವಧಿಯಲ್ಲಿ ಪಾಲಿಕೆಯ 11 ಆಸ್ತಿಗಳನ್ನು ಅಡಮಾನವಿಡಲಾಗಿತ್ತು. ಅದರಲ್ಲಿ 6 ಆಸ್ತಿಗಳನ್ನು ವಾಪಸ್ ಪಡೆಯಲಾಗಿದೆ. ಮೊದಲ ಹಂತವಾಗಿ ಕೆಂಪೇಗೌಡ ಮ್ಯೂಜಿಯಂ, ಮೇಯೋಹಾಲ್, ಜಾನ್ಸನ್ ಮಾರುಕಟ್ಟೆ ಮತ್ತು ಮಲ್ಲೇಶ್ವರಂ ಮಾರುಕಟ್ಟೆಯನ್ನು ಋಣಮುಕ್ತಗೊಳಿಸಲಾಗಿದೆ.

ಎರಡನೆ ಹಂತದಲ್ಲಿ ರಾಜಾಜಿನಗರ ವಾಣಿಜ್ಯ ಸಂಕೀರ್ಣ, ಪಾಟ್ರಿಟೌನ್‍ನ ಸ್ಲ್ಯಾಟ್ರಿ ಹೌಸ್‍ಅನ್ನು ಋಣಮುಕ್ತಗೊಳಿಸಲಾಗಿದೆ ಎಂದ ಶಿವರಾಜ್ ಅವರು ಉಳಿದ ಪಿಯುಬಿ ಕಟ್ಟಡ, ಕೆಆರ್ ಮಾರುಕಟ್ಟೆ, ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರುಕಟ್ಟೆಯನ್ನು ಋಣಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.

ಸಾಲಮುಕ್ತ:

ಬಿಬಿಎಂಪಿ ಮಾಡಿರುವ ಸಾಲದಿಂದ ಮುಕ್ತವಾಗಲು ಹಲವು ಕ್ರಮ ಕೈಗೊಳ್ಳಲಾಗಿದ್ದು, ಹಿಂದಿನ ಸಾಲಿನಲ್ಲಿ ಹುಡ್ಕೋದಿಂದ ಪಡೆದ 1433 ಕೋಟಿ ಸಾಲದಲ್ಲಿ 500 ಕೋಟಿಯನ್ನು ತೀರಿಸಲಾಗಿದೆ. ಶೇ.10.25 ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಶೇ.8.05 ಬಡ್ಡಿ ದರಕ್ಕೆ ಪರಿವರ್ತಿಸಿ 871 ಕೋಟಿಯನ್ನು ಎಸ್‍ಬಿಐಗೆ ವರ್ಗಾವಣೆ ಮಾಡಿದ್ದರಿಂದ ಸುಮಾರು 83 ಕೋಟಿಯಷ್ಟು ನಮಗೆ ಉಳಿತಾಯವಾಯಿತು ಎಂದು ಶಿವರಾಜ್ ಹೇಳಿದರು. ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಮುಂಗಾರು ಮಳೆ ಪ್ರಾರಂಭದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin