ಮೇಯರ್ ಅಭ್ಯರ್ಥಿ ಆಯ್ಕೆಗಾಗಿ ಬಿಜೆಪಿಯಲ್ಲಿ ಬಾರಿ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ತಿಂಗಳಾಂತ್ಯದಲ್ಲಿ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಮುಂದಿನ ವಾರ ಮಹತ್ವದ ಸಭೆ ನಡೆಯಲಿದೆ. 101 ಸದಸ್ಯರಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ವಂಚಿತರಾಗಿದ್ದು, ಕೊನೆ ಮೇಯರ್ ಅವಧಿ ನಮ್ಮ ಪಕ್ಷಕ್ಕೆ ದಕ್ಕಲಿರುವುದರಿಂದ ಒಮ್ಮತದ ಮೇಯರ್ ಅಭ್ಯರ್ಥಿಯನ್ನು ಆರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಮುಂದಿನ ವಾರ ಡಿಸಿಎಂ ಡಾ.ಅಶ್ವತ್ಥ ನಾರಾಯಣ್, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.  ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪಕ್ಷಕ್ಕೆ ಕೀರ್ತಿ ತರುವಂತಹ ಅಭ್ಯರ್ಥಿಯನ್ನು ಆರಿಸಿ ನಮ್ಮ ಬೆಂಬಲಿಗರಿಗೆ ಮೇಯರ್ ಸ್ಥಾನ ನೀಡುವಂತೆ ಯಾರೂ ಪಟ್ಟು ಹಿಡಿಯಬಾರದು ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.

ಕೊನೆ ವರ್ಷದಲ್ಲಿ ನಗರದಲ್ಲಿ ಉತ್ತಮ ಕೆಲಸಗಳಾಗುವಂತೆ ನೋಡಿಕೊಳ್ಳುವುದರ ಜತೆಗೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈ ವಿಚಾರದಲ್ಲಿ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸಿಎಂ ಖಚಿತಪಡಿಸಿದ್ದಾರೆ.  ನಗರವನ್ನು ಪ್ರತಿನಿಧಿಸುವ ಡಿಸಿಎಂ ಡಾ.ಅಶ್ವತ್ಥ ನಾರಾಯಣ್, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್ ಅವರು ನಗರದ ಎಲ್ಲ ಶಾಸಕರು, ಬಿಬಿಎಂಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವಂತೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣ್ ಅವರು ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಮಂಜುನಾಥ್‍ರಾಜು ಅವರಿಗೆ ಮೇಯರ್ ಸ್ಥಾನ ದೊರಕಿಸಿಕೊಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.  ಸಚಿವ ಸೋಮಣ್ಣ ಅವರು ತಮ್ಮ ಬೆಂಬಲಿಗರಾದ ಉಮೇಶ್ ಶೆಟ್ಟಿ ಮತ್ತು ಮೋಹನ್ ಕುಮಾರ್ ಅವರಲ್ಲಿ ಒಬ್ಬರನ್ನು ಮೇಯರ್ ಆಯ್ಕೆಗೆ ಪರಿಗಣಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆರ್.ಅಶೋಕ್ ಅವರು ಬೆಂಗಳೂರು ಉಸ್ತುವಾರಿ ಕಳೆದುಕೊಂಡ ನಂತರ ತಮ್ಮ ಬೆಂಬಲಿಗರಿಗೆ ಮೇಯರ್ ಸ್ಥಾನ ದಕ್ಕಿಸಿಕೊಡುವ ಮೂಲಕ ಮತ್ತೆ ಸಾಮ್ರಾಟರಾಗಲು ಹವಣಿಸುತ್ತಿದ್ದು, ಕುಮಾರಸ್ವಾಮಿ ಬಡಾವಣೆಯ ಎಲ್.ಶ್ರೀನಿವಾಸ್, ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರಲ್ಲಿ ಒಬ್ಬರಿಗೆ ಪಟ್ಟ ದಕ್ಕಿಸಿಕೊಡಲು ಕಾರ್ಯತಂತ್ರ ನಡೆಸುತ್ತಿದ್ದಾರೆ.
ಮೇಯರ್ ಆಯ್ಕೆ ವಿಚಾರದಲ್ಲಿ ಮೂಗು ತೂರಿಸಿರುವ ಸಂಘ ಪರಿವಾರದ ಮುಖಂಡರು ಕೆಲ ಬಿಜೆಪಿ ಸದಸ್ಯರ ಹೆಸರನ್ನು ಮೇಯರ್ ಆಯ್ಕೆಗೆ ಪರಿಗಣಿಸುವಂತೆ ಪಕ್ಷದ ಮೇಲೆ ಒತ್ತಡ ತಂದಿದೆ.

ಹೀಗಾಗಿ ಮೇಯರ್ ಆಯ್ಕೆ ವಿಚಾರದಲ್ಲಿ ಜಾಣತನ ಪ್ರದರ್ಶಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇಯರ್ ಆಯ್ಕೆ ವಿಚಾರವನ್ನು ಮೂವರು ಸಚಿವರ ಹೆಗಲಿಗೆ ವಹಿಸಿರುವುದರಿಂದ ಒಮ್ಮತದ ಮೇಯರ್ ಅಭ್ಯರ್ಥಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Facebook Comments