ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ ಹೂಳು ತೆಗೆಯಲು ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.14- ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಯಲ್ಲಿ ಹೂಳನ್ನು ಮುಂದಿನ ಮಾರ್ಚ್ ತಿಂಗಳ ಒಳಗೆ ಸಂಪೂರ್ಣವಾಗಿ ತೆಗೆದು ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾಲುವೆಯಲ್ಲಿ ಸಂಗ್ರಹಿಸಿರುವ ಹೂಳನ್ನು ಕಳೆದ ಜನವರಿಯಲ್ಲೇ ತೆಗೆದು ಹಾಕಬೇಕಿತ್ತು. ವಿವಿಧ ಕಾರಣಗಳಿಂದ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.

ಮುಂದಿನ ಮಾರ್ಚ್ 22ರ ವೇಳೆಗೆ ರಾಜಕಾಲುವೆಯಲ್ಲಿರುವ ಹೂಳನ್ನು ತೆಗೆದು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಜಯನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 123ರ ವೃಷಭಾವತಿ ಮುಖ್ಯಕಾಲುವೆಯಲ್ಲಿ ಮಳೆ ನೀರು ಕಾಲುವೆಯು ಮಾಗಡಿ ಮುಖ್ಯರಸ್ತೆಯಿಂದ ಚೋಳರಪಾಳ್ಯ ಮುಖೇನ ಪಾದರಾಯನಪುರ ಮೂಲಕ ಹಾದು ಹೋಗಿದೆ. ರಾಜಕಾಲುವೆಯಲ್ಲಿ ಬಿಡಬ್ಲ್ಯೂಎಸ್‍ಎಸ್‍ಬಿಯವರು ಒಳಚರಂಡಿ ಪೈಪ್ ಅಳವಡಿಸುತ್ತಿರುವುದರಿಂದ ಹೂಳು ತೆಗೆಯುವ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.

ಬಿಡಬ್ಲ್ಯೂಎಸ್‍ಎಸ್‍ಬಿಯು ಒಳಚರಂಡಿ ಪೈಪ್ ಅಳವಡಿಸುತ್ತಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದರು. ಇದನ್ನು ಕೂಡಲೇ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ಮಾಹಿತಿ ನೀಡಿದರು.

ಅಮೃತ್ ಯೋಜನೆಯಡಿ ಎಸ್4ಬಿ ಪ್ಯಾಕೇಜ್ ಯೋಜನೆಯಡಿಯಲ್ಲಿ ಗಣಪತಿನಗರದಿಂದ ಕೆಇಬಿ ಸಬ್‍ಸ್ಟ್ರೇಷನ್‍ವರೆಗೂ 600ಎಂಎಂನಿಂದ 1400 ಎಂಎಂ ವ್ಯಾಸದ ಆರ್‍ಸಿಸಿ ಕೊಳವೆ ಮಾರ್ಗವನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಯನ್ನು 2022ರ ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

Facebook Comments