ನಿಯಮ ಬಾಹಿರವಾಗಿ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವ ಅಧಿಕಾರಿಗಳಿಗೆ ಆಯುಕ್ತರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, :  ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಬಾಹಿರವಾಗಿ ಪಟಾಕಿ ಮಳಿಗೆ ಸ್ಥಾಪಿಸಲು ಅನುಮತಿ ನೀಡಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಇಂದಿಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಪಟಾಕಿ ಮಳಿಗೆ ಸ್ಥಾಪನೆ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಆಯುಕ್ತರು ಈ ಎಚ್ಚರಿಕೆ ನೀಡಿದರು.

ದೀಪಾವಳಿ ಸಂದರ್ಭದಲ್ಲಿ ಬಿಬಿಎಂಪಿ ಹಾಗೂ ಪೊಲೀಸರು ಜಂಟಿಯಾಗಿ ಗಸ್ತು ತಿರುಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಮಳಿಗೆಗಳನ್ನಿಟ್ಟರೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅನಿಲ್‍ಕುಮಾರ್ ಸೂಚಿಸಿದರು.  ಹಬ್ಬದ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಆಟದ ಮೈದಾನಗಳಲ್ಲಿ ಮಾತ್ರ ಪಟಾಕಿ ಮಳಿಗೆಗೆ ಅನುಮತಿ ನೀಡಬೇಕು. ಪೊಲೀಸ್ ಇಲಾಖೆ ಪರವಾನಗಿ ನೀಡಿರುವ ಮಳಿಗೆಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದರು.

ಪಟಾಕಿ ಮಳಿಗೆ ಸ್ಥಾಪಿಸುವ ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್‍ಗಳನ್ನು ನಿಲ್ಲಿಸಬೇಕು. ಮೈದಾನ ಪ್ರವೇಶಿಸುವ ಪ್ರವೇಶದ್ವಾರ ವಿಶಾಲವಾಗಿರಬೇಕು. ಮಳಿಗೆಗಳ ಸುತ್ತ ಬ್ಯಾರಿಕೇಡ್, ಬೀದಿದೀಪ ಮತ್ತು ಸಿಸಿ ಕ್ಯಾಮೆರಾ ಅಳವಡಿಸಿರಬೇಕು. ದುರದೃಷ್ಟವಶಾತ್ ಅವಘಡ ಸಂಭವಿಸಿದರೆ ಸಾರ್ವಜನಿಕರ ನಿರ್ಗಮಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಪಟಾಕಿ ಮಾರಾಟಗಾರರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮೈದಾನದಲ್ಲಿ ಸಂಗ್ರಹವಾಗುವ ಒಣತ್ಯಾಜ್ಯವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಅದೇ ರೀತಿ ಮಳಿಗೆಗಳ ಸುತ್ತಮುತ್ತ ಸಂಚಾರಿ ದಟ್ಟಣೆಯಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಗುವ ಅನಾಹುತ ತಪ್ಪಿಸಲು ಜಾಹೀರಾತು ನೀಡಲಾಗುವುದು. ದಿನದ 24 ಗಂಟೆ ಆಸ್ಪತ್ರೆ ತೆರೆಯುವಂತೆ ಸೂಚನೆ ನೀಡಲಾಗುವುದು ಎಂದು ಅನಿಲ್‍ಕುಮಾರ್ ಭರವಸೆ ನೀಡಿದರು. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ವಿಶೇಷ ಆಯುಕ್ತರಾದ ರಂದೀಪ್, ಲೋಕೇಶ್, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರಾಧಿಕಾರಿ ಸಯ್ಯದ್ ಖಾಜಾ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Facebook Comments