ಬೆಂಗಳೂರಲ್ಲಿ ಕುಸಿಯುವ ಅಂತದಲ್ಲಿ ಮತ್ತೊಂದು ಕಟ್ಟಡ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಹಂತದಲ್ಲಿದೆ. ಯಶವಂತಪುರ ಬಳಿ ಇರುವ ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್ ಬಿರುಕು ಬಿಟ್ಟಿದ್ದು, ಜನ ಆತಂಕ ದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ನಗರದಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿ ತಲುಪಿದೆ.

ಮಳೆಗೆ ಕಬ್ಬಿಣದ ಕಂಬಿ ತುಕ್ಕು ಹಿಡಿದು ಮೋಲ್ಡ್ ಕಿತ್ತುಹೋಗಿದೆ. ಬಿಲ್ಡಿಂಗ್ ಸಂಪೂರ್ಣ ಬಿರುಕುಬಿಟ್ಟಿದ್ದು, ಬಿಲ್ಡಿಂಗ್ ಸಂಪೂರ್ಣ ಪಾಚಿ ಕಟ್ಟಿ ಗಿಡಗಳು ಬೆಳೆದುಕೊಂಡಿವೆ. ಆರ್‍ಟಿಒ, ಕಾನೂನುಮಾಪನ ಶಾಸ್ತ್ರ ಇಲಾಖೆ, ಬೆಂಗಳೂರು ಒನ್, ಅಬಕಾರಿ, ಆರೋಗ್ಯ, ಕಂದಾಯ ಇಲಾಖೆ ಕಚೇರಿಗಳು ಈ ಕಟ್ಟಡದಲ್ಲಿವೆ. ಈ ಕಟ್ಟಡ ಶಿಥಿಲಗೊಂಡಿದೆ ಎಂದು ಬಿಬಿಎಂಪಿ ಸರ್ವೆಯಲ್ಲಿ ತಿಳಿಸಿದೆ.

ಕಳೆದ ಬಾರಿ ಸರ್ವೆ ನಡೆಸಿದಾಗ ಈ ಕಟ್ಟಡವನ್ನು ತೆರವುಗೊಳಿಸುವುದಾಗಿ ಬಿಬಿಎಂಪಿ ವಲಯ ಆಯುಕ್ತರು ಹೇಳಿದ್ದರು. ಕಾಂಪ್ಲೆಕ್ಸ್‍ನಲ್ಲಿರುವ ವರ್ತಕರಿಗೆ ಹೊಸ ಮಳಿಗೆಗಳನ್ನು ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಪ್ರತಿನಿತ್ಯ ವರ್ತಕರು, ಸಾರ್ವಜನಿಕರು ಭಯದಲ್ಲೇ ವ್ಯಾಪಾರ-ವಹಿವಾಟು ನಡೆಸುತ್ತಾರೆ.

ಬಿಲ್ಡಿಂಗ್‍ಗಳು ಬಿದ್ದು ಅಪಘಾತಗಳ ಮೇಲೆ ಅಪಘಾತವಾಗುತ್ತಿದ್ದರೂ ಬಿಬಿಎಂಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಶಿಥಿಲಾವಸ್ಥೆಯ ಕಟ್ಟಡಗಳ ಸರ್ವೆಯಲ್ಲಿ ಈ ಬಿಲ್ಡಿಂಗ್ ಇದ್ದರೂ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Facebook Comments