ಪ್ರತಿ 10 ದಿನಗಳಿಗೊಮ್ಮೆ ಮನೆ ಮನೆ ಸಮೀಕ್ಷೆ, ಕೊರೊನಾ ತಡೆಗೆ ಬಿಬಿಎಂಪಿ ಪ್ರಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.4- ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತ ಪ್ರಕರಣಗಳು ಹಾಗೂ ಸೋಂಕಿನಿಂದ ಮೃತಪಡುತ್ತಿರುವವರನ್ನು ರಕ್ಷಿಸುವ ಉದ್ದೇಶದಿಂದ ಪ್ರತಿ 10 ದಿನಗಳಿಗೊಮ್ಮೆ ವಾರ್ಡ್‍ನಲ್ಲಿರುವ ಎಲ್ಲ ಮನೆಗಳ ಸರ್ವೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ.

ವಿಧಾನಸಭಾ ಕ್ಷೇತ್ರವಾರು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಭಾಗೀಯ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಅಗತ್ಯ ಕ್ರಮ ಕೈಗೊಂಡು ಸೋಂಕಿತರು, ಪ್ರಾಥಮಿಕ ಸಂಪರ್ಕಿತರು ಮತ್ತು ಅಸಿಂಪ್ಟಮ್ಯಾಟಿಕ್ ರೋಗ ಲಕ್ಷಣವುಳ್ಳವರನ್ನು ಕೋವಿಡ್ ಕೇರ್, ಹೋಮ್ ಐಸೋಲೇಷನ್ ಹಾಗೂ ಆಸ್ಪತ್ರೆಗಳಿಗೆ ದಾಖಲೆ ಮಾಡಲಾಗುತ್ತಿದೆ.

ಆದರೂ ನಗರದಲ್ಲಿ ಪ್ರತಿನಿತ್ಯ 2000ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆ ಎಲ್ಲಾ ವಾರ್ಡ್‍ಗಳಲ್ಲಿ ಪ್ರತಿ 10 ದಿನಗಳಿಗೊಮ್ಮೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸೋಂಕು ತಗುಲುವುದನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಸಾವಿನ ಪ್ರಕರಣಗಳು ಕಡಿಮೆಯಾಗುವುದರ ಜೊತೆಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬಹುದಾಗಿದೆ. ಹೀಗಾಗಿ ಎಲ್ಲಾ ವಿಭಾಗೀಯ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವಾರ್ಡ್‍ಗಳಲ್ಲಿ ಪ್ರತಿ 10 ದಿನಗಳಿಗೊಮ್ಮೆ ಎಲ್ಲ ಮನೆಗಳ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.

ಮನೆಗಳಲ್ಲಿ ಬಿಪಿ, ಶುಗರ್ ಮತ್ತಿತರ ಕಾಯಿಲೆಗಳಿಂದ ನರಳುವವರ ಜೊತೆಗೆ ಹಿರಿಯ ನಾಗರಿಕರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹಿರಿಯರು ಮತ್ತು ಇತರ ರೋಗಲಕ್ಷಣ ಇರುವವರ ಮನೆಗಳಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಅವರಿಂದ ಹಿರಿಯರಿಗೆ ಸೋಂಕು ಹರಡುವ ಸಾಧ್ಯತೆಗಳಿವೆ.

ಇತರೆ ರೋಗಗಳಿಂದ ನರಳುತ್ತಿರುವವರು ಹಾಗೂ ಹಿರಿಯರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಂಥವರು ಸೋಂಕಿಗೆ ಬೇಗ ಗುರಿಯಾಗುತ್ತಾರೆ.

ಹೀಗಾಗಿ 10 ದಿನಗಳಿಗೊಮ್ಮೆ ಪದೇ ಪದೇ ಮನೆಗಳ ಸಮೀಕ್ಷೆ ನಡೆಸಿ ಶೀಘ್ರ ಔಷಧೋಪಾಚಾರ ನಡೆಸುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್‍ಗಳಲ್ಲೂ ಬಿಬಿಎಂಪಿ ಅಧಿಕಾರಿಗಳು ಸೈನಿಕರಂತೆ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.

Facebook Comments

Sri Raghav

Admin