ಬಿಬಿಎಂಪಿ ಚುನಾವಣೆ ವಿಳಂಬ : ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್‍

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಬಿಬಿಎಂಪಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್‍ನ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜ್, ಅಬ್ದುಲ್ ವಾಜೀದ್ ಹೈಕೋರ್ಟ್‍ಗೆ ತುರ್ತು ವಿಚಾರಣೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಬಿಬಿಎಂಪಿ ಆಡಳಿತ ಕೊನೆಗೊಳ್ಳುವ ಮುನ್ನವೇ ಬಿಬಿಎಂಪಿಯನ್ನು ವಿಸರ್ಜಿಸದೆ ಏಕಾಏಕಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.

ಚುನಾವಣೆಯನ್ನು ಮುಂದೂಡುವ ತಂತ್ರಗಾರಿಕೆಯಿಂದ ಉದ್ದೇಶಪೂರ್ವಕವಾಗಿ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ ಎಂದು ಆರೋಪಿಸಿರುವ ಶಿವರಾಜ್ ಮತ್ತು ವಾಜೀದ್ ಅವರು, ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇನ್ನೆರಡು ದಿನದಲ್ಲಿ ಹೈಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅರ್ಜಿದಾರರ ಪರ ಖ್ಯಾತ ವಕೀಲ ರವಿವರ್ಮ ಕುಮಾರ್ ಅವರು ವಾದ ಮಂಡಿಸಲಿದ್ದಾರೆ.

ಸೆ.10ಕ್ಕೆ ಬಿಬಿಎಂಪಿ ಆಡಳಿತ ರ್ಪೂಗೊಂಡಿದೆ. ಇದಕ್ಕೂ ಮುನ್ನವೇ ಚುನಾವಣೆ ನಡೆಸಿ ಹೊಸ ಸಮಿತಿ ಅಸ್ತಿತ್ವಕ್ಕೆ ಬರಬೇಕಿತ್ತು. ಚುನಾವಣೆ ನಡೆಸದೇ ಅಧಿಕಾರಾವಧಿಯ ಕೊನೆಯ ದಿನದಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಕೆಎಂಸಿ ಕಾಯ್ದೆಗೆ ವಿರುದ್ದವಾಗಿದೆ.

ಕೊರೊನಾ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಜನಪ್ರತಿನಿಧಿಗಳ ಆಡಳಿತವಿರಬೇಕು. ಆದರೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ನ್ಯಾಯಾಲಯದ ಚುನಾವಣೆ ನಡೆಸುವ ಸಂಬಂಧ ವಿಚಾರಣೆಯನ್ನು ತುರ್ತು ಕೈಗೆತ್ತಿಕೊಳ್ಳುವಂತೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರೂಪಿಸಲು ಶಾಸಕ ರಘು ನೇತೃತ್ವದ ಸಮಿತಿ ಸಿದ್ದತೆ ನಡೆಸಿದೆ. ಒಂದು ವೇಳೆ ನ್ಯಾಯಾಲಯ ಏನಾದರೂ ಚುನಾವಣೆ ನಡೆಸಲು ಸೂಚನೆ ನೀಡಿದರೆ ಅಗತ್ಯ ಸಿದ್ದತೆಗಳನ್ನು ಕೂಡ ಸರ್ಕಾರ ಮಾಡಿಕೊಂಡಿದೆ.  ಮೀಸಲಾತಿ ಪಟ್ಟಿ, ವಾರ್ಡ್‍ಗಳ ಪುನರ್ ವಿಂಗಡಣೆಯನ್ನು ಕೂಡ ಸಿದ್ದಪಡಿಸಿಕೊಂಡಿದೆ.

ಸ್ಥಳೀಯ ಸಂಸ್ಥೆಗಳನ್ನು ಹೆಚ್ಚು ದಿನಗಳ ಖಾಲಿ ಬಿಡಬಾರದು. ಇಂತಿಷ್ಟು ಅವಧಿಯಲ್ಲಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದರೆ ಅದಕ್ಕೂ ಅಗತ್ಯ ಸಿದ್ದತೆಗಳನ್ನು ಸರ್ಕಾರ ಮಾಡಿಕೊಂಡಿದೆ.

ಒಂದು ವೇಳೆ ಸಮಯ ಅವಕಾಶ ಸಿಕ್ಕರೆ ಪ್ರತ್ಯೇಕ ಕಾಯ್ದೆ ರೂಪಿಸಿ ವಾರ್ಡ್‍ಗಳ ಸಂಖ್ಯೆ ಹೆಚ್ಚಿಸಿ ಆರು ತಿಂಗಳು ಅಥವಾ ವರ್ಷದ ನಂತರ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

Facebook Comments