ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರದಿಂದ ನಾನಾ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೊರೊನಾ ನಿರ್ವ ಹಣೆ ವೈಫಲ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ಬಿಬಿಎಂಪಿ ಚುನಾವಣೆಗೆ ಹೋದರೆ ಸೋಲುವ ಭೀತಿ ಸರ್ಕಾರಕ್ಕೆ. ಹೀಗಾಗಿ ಕುಣಿಲಾರದವಳು ನೆಲ ಡೊಂಕು ಎಂದಂತೆ ಸಕಾಲಕ್ಕೆ ಬಿಬಿಎಂಪಿಗೆ ಚುನಾವಣೆ ನಡೆಸಲು ಇಷ್ಟವಿಲ್ಲದ ಸರ್ಕಾರ 250 ವಾರ್ಡ್ ರಚನೆ ಮಾಡುವ ನೆಪವೊಡ್ಡಿ ಚುನಾವಣೆ ಮುಂದೂಡಲು ಇನ್ನಿಲ್ಲದ ಕಸರತ್ತಿಗೆ ಕೈ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ.

ನಿನ್ನೆ ನಡೆದ ಅಧಿವೇಶನದಲ್ಲಿ 250 ವಾರ್ಡ್ ಗಳನ್ನು ರಚಿಸುವ ಬಿಬಿಎಂಪಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡ ಸರ್ಕಾರ ಅದೇ ದಿನ ನ್ಯಾಯಾಲಯದಲ್ಲಿ ಇನ್ನೆರಡು ವಾರದೊಳಗೆ 198 ವಾರ್ಡ್‍ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸುವ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ.

ಸರ್ಕಾರದ ಈ ನಡೆಯನ್ನು ನೋಡಿದರೆ ಬೆಂಗಳೂರಿನ ಅಭಿವೃದ್ದಿಯನ್ನು ಕಡೆಗಣಿಸಿ ಉದ್ದೇಶ ಪೂರ್ವಕವಾಗಿ ಒಂದೆರಡು ವರ್ಷಗಳ ಕಾಲ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಹುನ್ನಾರ ನಡೆಸುತ್ತಿದೆಯೇ ಎಂಬ ಗುಮಾನಿ ವ್ಯಕ್ತವಾಗುತ್ತಿದೆ.

ಸರ್ಕಾರದ ಈ ತೀರ್ಮಾನಕ್ಕೆ ನಗರವನ್ನು ಪ್ರತಿನಿಧಿಸುವ ಎಲ್ಲಾ ಪಕ್ಷಗಳ 28 ಶಾಸಕರ ಬೆಂಬಲವಿದೆ, ಅಲ್ಲದೆ ಬಿಬಿಎಂಪಿಯಲ್ಲಿ ತಮ್ಮದೇ ಪಾರುಪತ್ಯ ನಡೆಸುವ ಉಮೇದಿನಲ್ಲಿ ಇದ್ದಾರೆ. ಕಾಪೆರ್ರೇಟರ್‍ಗಳ ಕಿರಿಕಿರಿ ಇಲ್ಲದೆ ತಮ್ಮ ಕ್ಷೇತ್ರಗಳಲ್ಲಿ ತಮಗೆ ತೋಚಿದ ಹಾಗೆ ಕಾಮ ಗಾರಿಗಳನ್ನು ನಡೆಸಬಹುದು ಎಂಬ ಲೆಕ್ಕಾಚಾರದ ಮೇಲೆ ಶಾಸಕರು ಬಿಬಿಎಂಪಿ ವಿಧೇಯಕದ ವಿರುದ್ಧ ಚಕಾರ ಎತ್ತಿಲ್ಲ ಎಂದು ತಿಳಿದು ಬಂದಿದೆ.

ಒಂದು ವೇಳೆ ಸರ್ಕಾರದ ಈ ತೀರ್ಮಾನಕ್ಕೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದರೆ ಎರಡು ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ. ಕಳೆದ 2006ರ ಬಿಬಿಎಂಪಿಯ ಆಡಳಿತಾಧಿಕಾರಿ ಅವಧಿಯಲ್ಲಿ ಏನೆಲ್ಲಾ ಅವ್ಯವಹಾರ ನಡೆದಿದೆ ಎಂಬ ಅಂಕಿಅಂಶ ಎಲ್ಲರಿಗೂ ತಿಳಿದಿದೆ.

ಅಧಿಕಾರಿಗಳು ನಡೆಸಿದ ಅಂಧಾ ದರ್ಬಾರಿನಿಂದಲೇ ಪಾಲಿಕೆ ತನ್ನ ಅಮೂಲ್ಯವಾದ 10 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಡುವಂತಾಗಿತ್ತು. ಈ ಸತ್ಯ ಗೊತ್ತಿದ್ದರೂ ಸರ್ಕಾರ ಮತ್ತೆ ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಮಾಡಿದೆ. ಮತ್ತೆ ಅಧಿಕಾರಿಗಳ ಅವಧಿಯಲ್ಲಿ ಏನೇನೂ ನಡೆಯುವುದೋ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ಜಾಗವೆಲ್ಲಿದೆ: ಅಂದುಕೊಂಡಂತೆ ಸರ್ಕಾರ 250 ವಾರ್ಡ್‍ಗಳನ್ನು ರಚಿಸಿದರೆ ಚುನಾವಣೆ ಯಲ್ಲಿ ಗೆದ್ದು ಬರುವ 250 ಸದಸ್ಯರು, 25 ನಾಮ ನಿರ್ದೇಶಿತ ಸದಸ್ಯರು, 28 ಶಾಸಕರು, ಒಂಬತ್ತು ಎಂಎಲ್‍ಸಿಗಳು, ಆರು ರಾಜ್ಯಸಭಾ ಸದಸ್ಯರು, 5 ಸಂಸದರು, ನೂರಕ್ಕೂ ಹೆಚ್ಚು ಅಧಿಕಾರಿಗಳು ಸಭೆ ನಡೆಸಲು ಪಾಲಿಕೆ ಸಭಾಂಗಣ ಎಲ್ಲಿದೆ?

ಈಗಿರುವ ಕೌನ್ಸಿಲ್ ಕಟ್ಟಡದಲ್ಲಿ 198 ಸದಸ್ಯರು ಮತ್ತು ಇತರ ಜನಪ್ರತಿನಿಧಿಗಳು ಮಾತ್ರ ಕೂರಲು ಸಾಧ್ಯವಿದೆ. ಒಂದು ವೇಳೆ 250 ಮಂದಿ ಆರಿಸಿ ಬಂದರೆ ಸಭೆಯನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಾರೆಯೇ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.

ಗೊಂದಲ: ಈಗಿರುವ 800 ಚದುರ ಕಿ.ಮೀ ಸುತ್ತಳತೆಯ ಬಿಬಿಎಂಪಿಗೆ ಮತ್ತೆ 200 ಚದುರ ಕಿ.ಮೀ ಸುತ್ತಳತೆ ಪ್ರದೇಶವನ್ನು ಸೇರ್ಪಡೆ ಮಾಡಿ 250 ವಾರ್ಡ್ ರಚಿಸುವುದು ಸರ್ಕಾರದ ಉದ್ದೇಶ.ಬಿಬಿಎಂಪಿಗೆ ಹೊಂದಿಕೊಂಡಂತಿರುವ 60ಕ್ಕೂ ಹೆಚ್ಚು ಗ್ರಾಮಗಳನ್ನು ಸೇರಿಸಿಕೊಳ್ಳಲು ನಿರ್ಧರಿಸ ಲಾಗಿದೆ. ಆದರೆ, 250 ವಾರ್ಡ್ ರಚನೆಯಾಗಿ ಚುನಾವಣೆ ನಡೆಸುವ ವೇಳೆಗೊಳ ಗಾಗಿ ಬಿಬಿಎಂಪಿ ಸೇರ್ಪಡೆ ಯಾಗಲಿರುವ 60 ಗ್ರಾಮಗಳಿಗೆ ಗ್ರಾ.ಪಂ. ಚುನಾವಣೆ ನಡೆದು ಪಂಚಾಯಿತಿ ಆಧ್ಯಕ್ಷರು ನೇಮಕಗೊಂಡಿರುತ್ತಾರೆ. ಆಗ ಸರ್ಕಾರ ಯಾವ ಮಾನದಂಡ ಅನುಸರಿಸಲಿದೆ ಎಂಬ ಗೊಂದಲವಿದೆ.

ಹದಗೆಡಲಿದೆ ನಗರ: ಈಗಿರುವ ಎಂಟು ವಲಯಗಳನ್ನೇ ಸಮಗ್ರವಾಗಿ ಅಭಿವೃದ್ದಿಪಡಿಸಿಲ್ಲ. ಒಂದು ಚಿಕ್ಕ ಮಳೆಗೆ ನಗರ ನದಿಯಂತಾಗುತ್ತಿದೆ. ಇನ್ನು 12 ವಲಯಗಳನ್ನು ರಚಿಸಿದರೆ ನಗರವನ್ನು ಆ ದೇವರೇ ಕಾಪಾಡಬೇಕು.

ಇದರ ಜೊತೆಗೆ ಈಗಿರುವ ಜನರಿಗೆ ಕುಡಿಯಲು ನೀರು ಒದಗಿಸಲಾಗುತ್ತಿಲ್ಲ. ಇನ್ನು ಎರಡು ಕೋಟಿ ಜನರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತಂದರೆ ನೀರಿನ ಹಾಹಾಕಾರ ಮುಗಿಲು ಮುಟ್ಟುವುದು ಶತಸಿದ್ಧ. ಇದೇ ಅಲ್ಲದೆ ಇನ್ನಿತರ ಹಲವಾರು ಸಮಸ್ಯೆಗಳು ನಗರವನ್ನು ಕಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸರ್ಕಾರ ತುಘಲಕ್ ದರ್ಬಾರಿಗೆ ಅವಕಾಶ ಮಾಡಿಕೊಡದೆ ಶೀಘ್ರ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಿ ಅದರ ಆಡಳಿತ ಕೊನೆಗೊಳ್ಳುವ ವೇಳೆಗೆ ವೈಜ್ಞಾನಿಕವಾಗಿ ವಾರ್ಡ್ ಪುನರ್‍ವಿಂಗಡಣೆ ಮಾಡಿ 250 ವಾರ್ಡ್ ಗಳನ್ನು ರಚಿಸಲು ಕ್ರಮ ಕೈಗೊಳ್ಳಲಿ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

Facebook Comments