ಬಿಬಿಎಂಪಿ ಚುನಾವಣೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.12- ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕೆಂದು ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ.
ಹೈಕೋರ್ಟ್‍ನ ದ್ವಿಸದಸ್ಯಪೀಠ 4 ವಾರದೊಳಗೆ ಮೀಸಲಾತಿ ಪ್ರಕಟ ಹಾಗೂ 6 ವಾರದೊಳಗೆ ಚುನಾವಣೆ ನಡೆಸುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ತಡೆಯಾಜ್ಞೆ ನೀಡುವಂತೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ಬಿಬಿಎಂಪಿಗೆ ಕರ್ನಾಟಕ ಸರ್ಕಾರ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡಿದ್ದು, ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಚುನಾವಣೆಯನ್ನು ಹೊಸ ಕಾಯ್ದೆಯ ಪ್ರಕಾರ ನಡೆಸಬೇಕಾಗಿರುವುದರಿಂದ ಹೈಕೋರ್ಟ್‍ನ ದ್ವಿಸದಸ್ಯ ಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಸರ್ಕಾರ ಮನವಿ ಮಾಡಿದೆ.

ಕ್ಷೇತ್ರಗಳ ಪುನರ್ ವಿಂಗಡಣೆ, ವಲಯಗಳ ಹೆಚ್ಚಳ, ಬಿಬಿಎಂಪಿ ವ್ಯಾಪ್ತಿಗೆ ಹೊಸ ಗ್ರಾಮಗಳ ಸೇರ್ಪಡೆ, ಮೇಯರ್ ಅಧಿಕಾರಾವಧಿ ಹೆಚ್ಚಳ ಸೇರಿದಂತೆ ಕೆಲವು ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಜಾರಿ ಮಾಡಿರುವುದರಿಂದ ತಕ್ಷಣವೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕಾಯ್ದೆ ಅನುಷ್ಠಾನಕ್ಕೆ ಸಮಯಾವಕಾಶ ಬೇಕಾಗಿರುವುದರಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿದೆ.

ಮೂರು ದಿನಗಳ ಹಿಂದೆಯಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ 2020ನ್ನು ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಬಹುಮತದಿಂದ ಅಂಗೀಕರಿಸಲಾಗಿತ್ತು.
ಇದೀಗ ವಿಧಾನಮಂಡಲದಲ್ಲಿ ಅಂಗೀಕೃತ ಪಡೆದಿರುವ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತವಾದರೆ ಹೊಸ ಕಾಯ್ದೆ ಪ್ರಕಾರವೇ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ.
ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಗಳೇ ಹೆಚ್ಚಾಗಿವೆ.

#ಹೊಸ ಕಾಯ್ದೆಯಲ್ಲಿ ಏನಿದೆ:
ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿ ವರದಿ ಮಂಡನೆ ಮಾಡಿತ್ತು. ವಿಧೇಯಕದಲ್ಲಿ ಬಿಬಿಎಂಪಿಯ ವ್ಯಾಪ್ತಿಯನ್ನು 1 ಕಿ.ಮೀ ವಿಸ್ತರಿಸಲು ಅವಕಾಶ ನೀಡಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು 1 ಕಿ.ಮೀ. ಮೀರಿ ಇನ್ನೂ ನೂರಿನ್ನೂರು ಮೀಟರ್ ಆಚೆಗೆ ಇದ್ದರೂ ಅದನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ತೀರ್ಮಾನಿಸಲಾಗಿತ್ತು.

ಜೊತೆಗೆ ಪ್ರಸ್ತುತ 12 ತಿಂಗಳು ಅಥವಾ 1 ವರ್ಷ ಇರುವ ಬಿಬಿಎಂಪಿ ಮೇಯರ್ ಅವಧಿಯನ್ನು 30 ತಿಂಗಳು ಅಥವಾ ಎರಡೂವರೆ ವರ್ಷಕ್ಕೆ ಏರಿಕೆ ಮಾಡಲಾಗಿದೆ. ಹಾಲಿ ಇರುವ 198 ವಾರ್ಡ್‍ಗಳನ್ನು 243ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಮುಖ್ಯ ಆಯುಕ್ತರಾಗಿ ನೇಮಕ ಮಾಡಬೇಕು, ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 12ರಿಂದ 15ಕ್ಕೆ ಏರಿಕೆ ಮಾಡಲು ಅನುಮತಿ ನೀಡಲಾಗಿತ್ತು.

ಇದುವರೆಗೆ ಬಿಬಿಎಂಪಿ ಸದಸ್ಯರಾಗಿದ್ದವರು ಶಾಸಕರಾಗಿ, ಸಂಸದರಾಗಿ ಅಥವಾ ಇನ್ಯಾವುದೇ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಚುನಾಯಿತರಾದರೆ ಎರಡೂ ಕಡೆ ತಮ್ಮ ಸದಸ್ಯತ್ವ ಮುಂದುವರೆಸಲು ಅವಕಾಶ ಇತ್ತು. ಈಗಿನ ಮಸೂದೆಯಲ್ಲಿ ಆ ಅಂಶವನ್ನು ತೆಗೆದುಹಾಕಲಾಗಿದೆ. ಬಿಬಿಎಂಪಿ ಸದಸ್ಯರು ಶಾಸಕ, ಸಂಸದ ಸೇರಿದಂತೆ ಮತ್ತೊಂದು ಸಂಸ್ಥೆಯ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದರೆ ಮುಂದಿನ ಆರು ತಿಂಗಳಲ್ಲಿ ಯಾವುದಾದರೂ ಒಂದು ಸದಸ್ಯ ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಬೇಕೆಂದು ನಿಯಮ ತರಲಾಗಿತ್ತು.

ಈಗಿರುವ 8 ವಲಯಗಳನ್ನು 15ಕ್ಕೆ ಹೆಚ್ಚಿಸುವುದು, ಬಿಬಿಎಂಪಿ ವ್ಯಾಪ್ತಿಯ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸುವುದು, ಘನತ್ಯಾಜ್ಯ ನಿರ್ವಹಣಾ ಸೆಸ್, ಕ್ರಿಕೆಟ್ ವೀಕ್ಷಣೆ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಕರ, ನಗರ ಸಾರಿಗೆ ಕರ ಸಂಗ್ರಹಕ್ಕೆ ಪಾಲಿಕೆಗೆ ಅಧಿಕಾರ, ಜಲ ಸಂರಕ್ಷಣೆ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ 40/60 ಅಳತೆಯ ಮನೆಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯ, ಅಪಾಯಕಾರಿ ಕ್ವಾರಿಗಳನ್ನು ತಡೆಯುವ ಅಧಿಕಾರವನ್ನು ಪಾಲಿಕೆಗೆ ನೀಡಲಾಗಿತ್ತು.
ಒಟ್ಟಾರೆ ಜನಸಂಖ್ಯೆಗೆ ಅನುಗುಣವಾಗಿ ವಾರ್ಡುಗಳ ಸಂಖ್ಯೆ ಹೆಚ್ಚಿಸಿ ಪುನರ್ ವಿಂಗಡಣೆ ಮಾಡಲಾಗಿದೆ.

Facebook Comments