ಬಿಬಿಎಂಪಿ ಚುನಾವಣೆ : ಸುಪ್ರೀಂನಲ್ಲಿ ನಾಳೆ ವಿಚಾರಣೆ, ಆಕಾಂಕ್ಷಿಗಳಲ್ಲಿ ತಳಮಳ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.17- ಬಿಬಿಎಂಪಿ ಚುನಾವಣೆ ಮುಂದೂಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಮೇಲ್ಮನವಿ ನಾಳೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್‍ನತ್ತ ನೆಟ್ಟಿದ್ದು, ಬಿಬಿಎಂಪಿ ಮಾಜಿ ಸದಸ್ಯರು, ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಯಾಗಿದೆ.  ಬಿಬಿಎಂಪಿ ಚುನಾವಣೆ ಮುಂದೂಡಿಕೆಯಾಗಬೇಕೆಂಬುದು ಪಕ್ಷಾತೀತವಾಗಿ ಬಹುತೇಕ ಶಾಸಕರ ಒಲವಾಗಿದೆ. ಅದೇ ರೀತಿ ಬಿಬಿಎಂಪಿಗೆ ಚುನಾವಣೆ ನಡೆಯಬೇಕೆಂಬುದು ಬಹುತೇಕ ಎಲ್ಲ ಮಾಜಿ ಸದಸ್ಯರ ಅಭಿಪ್ರಾಯವಾಗಿದೆ.

ಒಂದು ತಿಂಗಳೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸಿ ನಂತರ ಆರು ವಾರದೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿತ್ತು. ಅದರಂತೆ ಹಾಲಿ ಇರುವ 198 ವಾರ್ಡ್‍ಗಳಿಗೆ ಸರ್ಕಾರ ಚುನಾವಣೆ ನಡೆಸಬೇಕಾಗಿತ್ತು.

ಆದರೆ ಕೆಎಂಸಿ ಕಾಯ್ದೆ ತಿದ್ದುಪಡಿ ಮಾಡಿ ವಾರ್ಡ್‍ಗಳ ಸಂಖ್ಯೆ ಹೆಚ್ಚಳ ಮಾಡಿ ಮೇಯರ್ ಅವಧಿ ಹೆಚ್ಚಳ, ಸ್ಥಾಯಿ ಸಮಿತಿಗಳ ಸಂಖ್ಯೆ ಕಡಿತಗೊಳಿಸಿ, ರಾಜ್ಯ ಸರ್ಕಾರ ಮಸೂದೆ ಮಂಡನೆ ಮಾಡಿ ಚುನಾವಣೆ ಮುಂದೂಡಲು ಮಾಡಿದ ಪ್ರಯತ್ನಕ್ಕೆ ಹೈಕೋರ್ಟ್ ಸೊಪ್ಪು ಹಾಕಲಿಲ್ಲ.

ಹೀಗಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಾಳೆ ಬರಲಿದೆ. ಹಾಗಾಗಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ.  1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಈ ಹಿಂದಿನ ಚುನಾಯಿತ ಕೌನ್ಸಿಲ್ ಅವಧಿ ಮುಗಿಯುವ ಮುನ್ನ ಅಂದರೆ ಸೆ.10ರೊಳಗೆ ನಡೆಸಿರಲಿಲ್ಲ.

ಚುನಾವಣೆಯನ್ನು ವಿಳಂಬ ಮಾಡುವ ಉದ್ದೇಶದಿಂದಲೇ ಈ ಪ್ರಯತ್ನ ಮಾಡಿದೆ ಎಂದು ಕಾಂಗ್ರೆಸ್ ಮುಖಂಡರಾದ ಎಂ.ಶಿವರಾಜ್ ಹಾಗೂ ಅಬ್ದುಲ್ ವಾಜೀದ್ ಸಲ್ಲಿಸಿದ್ದ ರಿಟ್ ಅರ್ಜಿ ಪರ ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ್ ವಾದಿಸಿದ್ದರು.

ಜುಲೈನಲ್ಲಿಯೇ 198 ವಾರ್ಡ್‍ಗಳ ಪುನರ್ ವಿಂಗಡಣೆಯನ್ನು ಸರ್ಕಾರ ಮಾಡಿದ್ದು, ಆಯೋಗ ಚುನಾವಣಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಮತದಾರರ ಪಟ್ಟಿಯನ್ನು ತಯಾರು ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಮೂರು ಕೋಟಿ ರೂ.ಗಳನ್ನು ಕೂಡ ವೆಚ್ಚ ಮಾಡಿದೆ ಎಂದು ಚುನಾವಣಾ ಆಯೋಗದ ಪರ ಫಣೀಂದ್ರ ವಾದಿಸಿದ್ದರು.

ನಗರದ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯತ್ವ ಹೊಂದುವ ಉದ್ದೇಶದಿಂದ ವಾರ್ಡ್‍ಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ನಗರದಲ್ಲಿ ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ ಇದು ಅನಿವಾರ್ಯ.  ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ವಾರ್ಡ್‍ಗಳ ಸಂಖ್ಯೆಯನ್ನು ಕನಿಷ್ಠ 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ತಿದ್ದುಪಡಿಯು ಸಂವಿಧಾನದ 243(ಯು) ವಿಧಿಯ ಆಶಯಗಳಿಗೆ ವಿರ್ಧುಧವಾಗಿಲ್ಲ. ಚುನಾವಣಾ ಸಂಬಂಧ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆಇದೆ ಎಂದು ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ನಾವಡಗಿ ಪ್ರಬಲ ವಾದ ಮಂಡಿಸಿದ್ದರು.

ಈ ಎಲ್ಲ ವಾದ-ವಿವಾದಗಳನ್ನು ತಳ್ಳಿಹಾಕಿದ್ದ ಹೈಕೋರ್ಟ್ ಬಿಬಿಎಂಪಿಗೆ ಒಂದು ತಿಂಗಳೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸಿ 6 ವಾರಗಳೊಳಗೆ ಚುನಾವಣೆ ನಡೆಸುವಂತೆ ಸ್ಪಷ್ಟ ಆದೇಶ ನೀಡಿತ್ತು.  ಇದನ್ನು ಆಕ್ಷೇಪಿಸಿ ರಾಜ್ಯ ಸರ್ಕಾರ ಡಿ.10ರಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನಾಳೆ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ಈ ಹಿಂದೆಯೂ ಕೂಡ ಹಲವಾರು ಬಾರಿ ಬಿಬಿಎಂಪಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಕಾನೂನು ಹೋರಾಟ ಮಾಡಲಾಗಿತ್ತು.

2007ರಲ್ಲಿ ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಗಿತ್ತು. ಆ ಬಳಿಕ ನಗರದಲ್ಲಿ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.  ಅದಕ್ಕೆ ಅನುಗುಣವಾಗಿ ವಾರ್ಡ್ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ಹೀಗಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಿದೆ.  ಸುಪ್ರೀಂಕೋರ್ಟ್ ಯಾವ ರೀತಿ ಪರಿಗಣಿಸುತ್ತದೆ ಎಂಬುದನ್ನು ಕಾದುನೋಡಬೇಕು.

ಈ ಕುರಿತು ಪ್ರತಿಕ್ರಿಯಿಸಿದ ಮೂಲ ಅರ್ಜಿದಾರರಾದ ಎಂ.ಶಿವರಾಜ್ ಅವರು, ಸ್ಥಳೀಯ ಆಡಳಿತಗಳಿಗೆ ಬಲ ತುಂಬುವ ಉದ್ದೇಶದಿಂದ ಕೆಎಂಸಿ(1976) ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಆದರೆ ಬೃಹತ್ ನಗರಗಳಲ್ಲಿ ಆಡಳಿತದ ಹಿಡಿತವನ್ನು ತಿದ್ದುಪಡಿ ನೆಪದಲ್ಲಿ ಆಡಳಿತಾರೂಢ ಸರ್ಕಾರಗಳು ತೆಗೆದುಕೊಳ್ಳಲು ಇಂತಹ ಪ್ರಯತ್ನಗಳನ್ನು ಪದೇ ಪದೇ ಮಾಡುತ್ತಿರುತ್ತವೆ.

ಹಾಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿರುತ್ತದೆ. ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಮಾತನಾಡಿ, ಸುಪ್ರೀಂಕೋರ್ಟ್ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಿ ಎಂದರೆ ಸರ್ಕಾರ ಸಿದ್ದವಿದೆ. ಕಾಲಾವಕಾಶ ನೀಡಿ 243 ವಾರ್ಡ್‍ಗಳಿಗೆ ಚುನಾವಣೆ ನಡೆಸಿದರೆ ಹೊಸ ರೂಪ ಪಡೆದುಕೊಳ್ಳಲಿದೆ ಎಂದು ಹೇಳಿದರು.

Facebook Comments