ಯಾವ ಜನಗಣತಿ ಆಧಾರದ ಮೇಲೆ ನಡೆಯಲಿದೆ ಬಿಬಿಎಂಪಿ ಚುನಾವಣೆ…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30-ಬಿಬಿಎಂಪಿ ಚುನಾವಣೆಗೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಮಾರ್ಚ್ ಇಲ್ಲವೆ ಏಪ್ರಿಲ್‍ನಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಯಾವ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂಬುದು ಮಾತ್ರ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ.

ಬಿಬಿಎಂಪಿ ಚುನಾವಣೆ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಡಿ.6 ರಂದು ಅರ್ಜಿಯ ವಿಚಾರಣೆ ಮತ್ತು ಅಂತಿಮ ಆದೇಶ ಹೊರಡಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ. ಒಂದು ವೇಳೆ ಸುಪ್ರೀಕೋರ್ಟ್ ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದರೆ ಶೀಘ್ರದಲ್ಲೇ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ.

ಹೀಗಾಗಿ ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ನಾವು ಚುನಾವಣೆ ಮಾಡಲು ಸಿದ್ದರಿದ್ದೇವೆ ಎಂದು ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ. ಎಲ್ಲ ಅಂದುಕೊಂಡಂತೆ ಮುಂದಿನ ಏಪ್ರಿಲ್ ತಿಂಗಳೊಳಗೆ ಚುನಾವಣೆ ನಡೆದರೆ ಯಾವ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂಬುದು ಮಾತ್ರ ಇನ್ನು ಬಹಿರಂಗಗೊಂಡಿಲ್ಲ.

ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿ ಆಧಾರದ ಮೇಲೆ ಆಯಾ ಚುನಾವಣೆಗಳನ್ನು ನಡೆಸುವುದು ವಾಡಿಕೆ. ಬಿಎಂಪಿ ಬಿಬಿಎಂಪಿಯಾಗಿ ಪರಿವರ್ತನೆಗೊಂಡ ನಂತರ 2010 ರಲ್ಲಿ ನಡೆದ ಮೊದಲ ಚುನಾವಣೆಯನ್ನು 2001ರ ಜನಗಣತಿ ಆಧಾರದ ಮೇಲೆ ನಡೆಸಲಾಗಿತ್ತು.

2015ರಲ್ಲಿ ನಡೆದ ಚುನಾವಣೆಯನ್ನು 2011ರ ಜನಗಣತಿ ಆಧಾರದ ಮೇಲೆ ನಡೆಸಬೇಕಿತ್ತು. ಆದರೆ, ಸರ್ಕಾರ ತಾಂತ್ರಿಕ ದೋಷ ಕಾರಣ ನೆಪವೊಡ್ಡಿ 2015ರ ಚುನಾವಣೆಯನ್ನು 2001ರ ಜನಗಣತಿ ಆಧಾರದ ಮೇಲೆ ನಡೆಸಿತ್ತು.

ಈ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಉಚ್ಛ ನ್ಯಾಯಾಲಯ ಮುಂದಿನ ಚುನಾವಣೆಯನ್ನು ಪ್ರಸ್ತುತ ವರ್ಷದ ಜನಗಣತಿ ಆಧಾರದ ಮೇಲೆ ನಡೆಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. 2015ರ ಬಿಬಿಎಂಪಿ ಆಡಳಿತಾವ 2020ರ ಸೆಪ್ಟೆಂಬರ್‍ಗೆ ಅಂತ್ಯಗೊಂಡ ಸಂದರ್ಭದಲ್ಲೇ ಪಾಲಿಕೆಗೆ ಚುನಾವಣೆ ನಡೆದಿದ್ದರೆ 2011ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಬಹುದಾಗಿತ್ತು.

ಆದರೆ, ಸರ್ಕಾರ ಬಿಬಿಎಂಪಿ ವಿಸ್ತರಣೆ ನೆಪವೊಡ್ಡಿ ಚುನಾವಣೆಯನ್ನು ಮುಂದೂಡಿತ್ತು. ಹೀಗಾಗಿ 2020ರಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ 2022ರಲ್ಲಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಬೇಕಾದರೆ ಹೊಸದಾಗಿ ನಡೆಸಬೇಕಿರುವ 2021ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಇನ್ನು 2021ರ ಜನಗಣತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಯಾವ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಒಂದು ವೇಳೆ 2021ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಬಂದರೆ ಬಿಬಿಎಂಪಿ ಚುನಾವಣೆ ನಡೆಸಲು ಕನಿಷ್ಠ ಮತ್ತೊಂದು ವರ್ಷ ಬೇಕಾಗುತ್ತದೆ. ಏಕೆಂದರೆ, 2021ರ ಜನಗಣತಿ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಒಂದು ವೇಳೆ ಈಗ ಆರಂಭವಾದರೂ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 9 ತಿಂಗಳ ಕಾಲವಕಾಶ ಬೇಕು.

ಹೊಸ ಜನಗಣತಿ ಆಧಾರದ ಮೇಲೆ ವಾರ್ಡ್ ಪುನರ್‍ವಿಂಗಡಣೆ ಮಾಡಿ ಹೊಸ ಮತದಾರರ ಪಟ್ಟಿ ಸಿದ್ದಪಡಿಸಲು ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ 2021ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಬೇಕಾದರೆ ಇನ್ನೊಂದು ವರ್ಷ ಕಾಯಬೇಕಾಗುತ್ತದೆ.

2021ರ ಜನಗಣತಿ ಆಧಾರದ ಮೇಲೆ ಬಿಬಿಎಂಪಿ ಚುನಾವಣೆ ನಡೆಯುವುದೆ ಎಂದು ಮಾಹಿತಿ ಹಕ್ಕು ಆದ್ಯಯನ ಕೇಂದ್ರದ ಅಮರೇಶ್ ಎಂಬುವರು ಕೇಳಿದ್ದ ಮಾಹಿತಿಗೆ ಉತ್ತರ ನೀಡಿರುವ ಚುನಾವಣಾ ಆಯೋಗ, ಸಕಾಲಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಹೊಣೆ ನಮ್ಮ ಮೇಲಿದೆ. ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಬದ್ದರಾಗಿ ಚುನಾವಣೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ಉತ್ತರ ನೀಡಿದೆ.

ಹೀಗಾಗಿ ಬಿಬಿಎಂಪಿ ಚುನಾವಣೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ನಂತರವಷ್ಟೆ ಬಿಬಿಎಂಪಿಗೆ ಯಾವಾಗ ಚುನಾವಣೆ ನಡೆಯಲಿದೆ. ಯಾವ ಜನಗಣತಿ ಮಾನದಂಡ ಅನುಸರಿಸಲಾಗುವುದು ಎಂಬುದು ಖಚಿತಪಡಲಿದೆ.

Facebook Comments