ಬಿಬಿಎಂಪಿ ಚುನಾವಣೆ : ತೀರ್ಪನ್ನು ನಾಳೆಗೆ ಮುಂದೂಡಿದ ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜ್ ಮತ್ತು ಅಬ್ದುಲ್ ವಾಜಿತ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ನಾಳೆ 2.30ಕ್ಕೆ ಮುಂದೂಡಿದೆ.

ಮೇಯರ್ ಗೌತಮ್‍ಕುಮಾರ್ ಅವರ ಅವಧಿ ಮುಗಿಯುತ್ತಿದ್ದಂತೆ ಬಿಬಿಎಂಪಿಯ 198 ವಾರ್ಡ್‍ಗಳನ್ನು ವಿಸರ್ಜಿಸಿ 243 ವಾರ್ಡ್ ರಚಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿರುವುದರಿಂದ ಸಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧರಾಗಿದ್ದರೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಚುನಾವಣಾ ಆಯೋಗ ಕೋರ್ಟ್ ಮೆಟ್ಟಿಲೇರಿತ್ತು.

ಈ ಮಧ್ಯೆ ಶಿವರಾಜ್ ಮತ್ತು ವಾಜಿದ್ ಸಲ್ಲಿಸಿದ್ದ ಅರ್ಜಿಯನ್ನು ಆಯೋಗದ ವಿಚಾರಣೆಯ ಜತೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಸರ್ಕಾರಕ್ಕೆ ನೋಟೀಸ್ ನೀಡಿ ಸಮಜಾಯಿಷಿ ನೀಡುವಂತೆ ಸೂಚಿಸಿತ್ತು. ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧ. ಆದರೆ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪುನರ್ ವಿಂಗಡಿಸಿ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚಿಸಿ ಚುನಾವಣೆ ನಡೆಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ವಾದಿ-ಪ್ರತಿವಾದಿಗಳ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಪೀಠ ಇಂದು ಮಧ್ಯಾಹ್ನ 3.30ಕ್ಕೆ ಪ್ರಕಟವಾಗಬೇಕಿದ್ದ ತೀರ್ಪನ್ನು ನಾಳೆ ಮದ್ಯಾಹ್ನ 2.30 ಕ್ಕೆ ಮುಂದೂಡಿದೆ.

Facebook Comments