ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8-ಬಿಬಿಎಂಪಿಗೆ ಚುನಾವಣೆ ನಡೆಸದೆ ಮುಂದೂಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಕೌನ್ಸಿಲ್ ಸಭೆಯಲ್ಲಿಂದು ಬಾವಿಗಿಳಿದು ಪ್ರತಿಭಟನೆ ನಡೆಸಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.  ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಗಿಳಿದ ಸದಸ್ಯರು, ಬಿಬಿಎಂಪಿ ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಮುಗಿಯಲಿದೆ.

ಚುನಾವಣೆ ಯಾಕೆ ನಡೆಸುತ್ತಿಲ್ಲ ನಿಮ್ಮ ಉದ್ದೇಶವಾದರೂ ಏನು? ಕಳೆದ ಬಾರಿಯಂತೆ ಚುನಾವಣೆಯನ್ನು ಮುಂದೂಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಏರು ಧ್ವನಿಯಲ್ಲಿ ಆರೋಪಿಸಿದರು.  ಪ್ರಸ್ತುತ ಚುನಾವಣೆ ನಡೆದರೆ ಬಿಜೆಪಿಗೆ ಸೋಲುವ ಭಯವಿದೆ. ಅದಕ್ಕೆ ಚುನಾವಣೆಯನ್ನು ನಡೆಸುತ್ತಿಲ್ಲ. ಮುಂದೂಡುವ ತಂತ್ರ ಅನುಸರಿಸುತ್ತಿದೆ.

ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡದೆ ನಡೆಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆಗ್ರಹಿಸಿ ಬೇಕೆ ಬೇಕು ಚುನಾವಣೆ ಬೇಕು ಎಂದು ಘೋಷಣೆಗಳನ್ನು ಕೂಗಿದರು.

ಮೇಯರ್ ಗೌತಮ್‍ಕುಮಾರ್ ಜೈನ್ ಅವರು ಚುನಾವಣೆ ನಡೆಸುತ್ತೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಪ್ರತಿಭಟನಾನಿರತ ಸದಸ್ಯರ ಮನವೊಲಿಸುವ ಯತ್ನ ಮಾಡಿದರು.

ಬಿಜೆಪಿ ಬಗ್ಗೆ ನಮಗೆ ಯಾವುದೇ ನಂಬಿಕೆಯಿಲ್ಲ. ಕಳೆದ ಬಾರಿಯಂತೆಯೇ ಚುನಾವಣೆ ಮುಂದೂಡುತ್ತೆ. ಆ ಪಕ್ಷಕ್ಕೆ ಸೋಲಿನ ಭಯವಿದೆ. ಅದಕ್ಕೆ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾನಿರತ ಸದಸ್ಯರು ದೂರಿದರು.

Facebook Comments