ಬಿಬಿಎಂಪಿ ನೌಕರರ ಸಂಘದ 2 ಬಣಗಳ ನಡುವಿನ ಗುದ್ದಾಟಕ್ಕೆ ಹೊಸ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ಬಿಬಿಎಂಪಿ ಅಧಿಕಾರಿಗಳ ಸಂಘದ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಗ್ರಾಮಗಳ ದಿನಗೂಲಿ ನೌಕರರರನ್ನು ಖಾಯಂಗೊಳಿಸಲು 3 ಲಕ್ಷ ಲಂಚ ಕೇಳಲಾಗುತ್ತಿದೆ ಎಂದು ನಿನ್ನೆ ವೈರಲ್ ಆದ ಆಡಿಯೋ ಬಿಬಿಎಂಪಿಯಲ್ಲಿ ಸಂಚಲನ ಸೃಷ್ಟಿಸಿದೆ.

ದಿನಗೂಲಿ ನೌಕರರರನ್ನು ಖಾಯಂ ಮಾಡಬೇಕಾದರೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಮತ್ತು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ದಯಾನಂದ್ ಅವರಿಗೆ ಲಂಚ ನೀಡಬೇಕು ಎಂಬ ಬಗ್ಗೆ ಇಬ್ಬರು ವ್ಯಕ್ತಿಗಳ ನಡುವಿನ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತಕ್ಷಣ ಎಚ್ಚೆತ್ತುಕೊಂಡ ದಯಾನಂದ್ ಅವರು ಲಂಚದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಂಭಾಷಣೆಯಲ್ಲಿ ನನ್ನ ವಿಚಾರ ಪ್ರಸ್ತಾಪಿಸಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಏಳಿಗೆಯನ್ನು ಸಹಿಸದ ಮಾಯಣ್ಣ ಎಂಬ ವ್ಯಕ್ತಿ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‍ರಾಜ್ ಆರೋಪಿಸಿದ್ದಾರೆ. ಮಾತ್ರವಲ್ಲ ಸತ್ಯಾಸತ್ಯತೆ ಪತ್ತೆ ಹಚ್ಚುವಂತೆ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ವಿರುದ್ಧ ಪಿತೂರಿ ಮಾಡಿರುವ ವ್ಯಕ್ತಿಯ ವಿರುದ್ಧ ಸೋಮವಾರದ ನಂತರ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ನೌಕರರ ಸಂಘದಲ್ಲಿ ಈ ಹಿಂದಿನಿಂದಲೂ ಅಮೃತ್‍ರಾಜ್ ಮತ್ತು ಮಾಯಣ್ಣ ಗುಂಪಿನ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ.

ಅವರಿಬ್ಬರ ಬಣಗಳ ನಡುವೆ ಕೆಸರೆರೆಚಾಟ ಮಾಮೂಲು. ಈಗ ಮತ್ತೊಮ್ಮೆ ಎರಡು ಬಣಗಳ ನಡುವೆ ಆರಂಭವಾಗಿರುವ ಗುದ್ದಾಟ ಯಾವ ಹಂತಕ್ಕೆ ತಲುಪುವುದೋ ಕಾದು ನೋಡಬೇಕು.

Facebook Comments