ಬಿಬಿಎಂಪಿ ಎಂಜನಿಯರ್ ಮೇಲೆ ಎಸಿಬಿ ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ಬಿಬಿಎಂಪಿ ವ್ಯಾಪ್ತಿಯ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ನೀರುಗಾಲುವೆ ವಿಭಾಗದ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಕಾಮಗಾರಿಗಳ ಗುಣಮಟ್ಟದ ಮೇಲುಸ್ತುವಾರಿ ಹೊಂದಿರುವ ಇಂಜಿನಿಯರ್ ಮೇಲೆ ಎಸಿಬಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

ಅಧಿಕಾರಿಗಳು ಶಾಮೀಲಾಗಿ ಕಾಮಗಾರಿಗಳನ್ನು ನಡೆಸದೆ ಕಾನೂನಿಗೆ ವಿರುದ್ಧವಾಗಿ ಜಾಬ್‍ಕೋಡ್ ನೀಡಿ ಸುಮಾರು ಏಳೂವರೆ ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು  ಆರೋಪಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್.ಅಮರೇಶ್ ಅವರು ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸೂಚಿಸಿದೆ.

ಕಾಮಗಾರಿ ನಡೆಸದೆಯೇ ಇಷ್ಟು ಪ್ರಮಾಣದ ಹಣ ಪಡೆಯಲಾಗಿದೆ. ಬೃಹತ್ ಮಳೆ ನೀರುಗಾಲುವೆ ಕಾಮಗಾರಿಯಾಗಿರುವುದರಿಂದ ಹೂಳನ್ನು ತೆಗೆಯಲು ದೊಡ್ಡ ಮಟ್ಟದ ಯಂತ್ರೋಪಕರಣಗಳ ಅವಶ್ಯಕತೆ ಇದ್ದು, ಇಷ್ಟೊಂದು ಪ್ರಮಾಣದ ಹೂಳನ್ನು ಎಲ್ಲಿ ಡಂಪ್ ಮಾಡಿರುತ್ತಾರೆ ಎಂಬ ಮಾಹಿತಿ ಇಲ್ಲ. ಹಾಗಾಗಿ ನಡೆಯದ ಕಾಮಗಾರಿಗೆ ಹಣ ಪಡೆದು ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ಅಮರೇಶ್ ದೂರು ನೀಡಿದ್ದರು.

ಇವರು ಮಾಡಿದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಹೂಳೆತ್ತುವ ಕಾಮಗಾರಿಯ ಬಿಲ್ ಪಾವತಿ ಮಾಡಿರುವ ಬಿಬಿಎಂಪಿಯ ನೀರುಗಾಲುವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಕಾಮಗಾರಿ ಗುಣಮಟ್ಟದ ಮೇಲುಸ್ತುವಾರಿ ಜವಾಬ್ದಾರಿ ಹೊಂದಿರುವ ಬಿಬಿಎಂಪಿ ಅಭಿಯಂತರರ ಮೇಲೂ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರ್ಕಾರ ಆದೇಶಿಸಿದೆ.

ಬಿಬಿಎಂಪಿ ಹೂಳೆತ್ತುವ ಕಾಮಗಾರಿ ಒಂದು ಬೃಹತ್ ಪ್ರಮಾಣದ ಹಗರಣವಾಗಿದೆ. ತಮ್ಮ ಮನಸ್ಸಿಗೆ ಬಂದಷ್ಟು ಲೆಕ್ಕ ಕೊಟ್ಟು ತೋಚಿದಷ್ಟನ್ನು ದೋಚಿಕೊಳ್ಳಲು ಚರಂಡಿ ಹೂಳೆತ್ತುವ ಕೆಲಸ ಅಧಿಕಾರಿಗಳ ಪಾಲಿಗೆ ಒಂದು ದೊಡ್ಡ ಖಜಾನೆಯಾಗಿ ಮಾರ್ಪಟ್ಟಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ಪಾಲಿಕೆಗೆ ನಿರಂತರ ನಷ್ಟವಾಗುತ್ತಲೇ ಇರುತ್ತದೆ. ಜನರ ತೆರಿಗೆಯ ಹಣ ಅಧಿಕಾರಿಗಳ ಜೇಬಿಗೆ ಸೇರುತ್ತಲೇ ಇರುತ್ತದೆ.

Facebook Comments