ಗುಂಡಿ ಮುಚ್ಚದೆ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಇಂಜಿನಿಯರ್ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ರಸ್ತೆ ನಡುವಿನ ಗುಂಡಿಯಿಂದ ಅಪಘಾತವಾಗಿ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಬಿಬಿಎಂಪಿ ಇಂಜಿನಿಯರ್ ಅವರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಿ ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ರಸ್ತೆ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರನನ್ನೂ ಆರೋಪಿ ಎಂದು ಪರಿಗಣಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ನವೆಂಬರ್ 27ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಅಜೀಂ ಅಹ್ಮದ್ (21) ಎಂಬ ಯುವಕ ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ಥಣಿಸಂದ್ರದಿಂದ ಹೆಗಡೆನಗರಕ್ಕೆ ಪ್ರಯಾಣಿಸುತ್ತಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಪ್ರಕಾಶ್ ಹಾರ್ಡ್‍ವೇರ್ ಮುಂಭಾಗ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದ ಗುಂಡಿಯನ್ನು ಗಮಿನಿಸದೆ, ವಾಹನ ಅದಕ್ಕೆ ಇಳಿದು ಆಯತಪ್ಪಿ ಅಜೀಂ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ.

ಅದೇ ಸಮಯಕ್ಕೆ ವೇಗವಾಗಿ ಬಂದ 407 ಸರಕು ಸಾಗಾಣಿಕೆ ವಾಹನ ಅಜೀಂನ ಬಲಗಾಲು ತೊಡೆ ಮತ್ತು ಬಲಗೈಗೆ ತೀವ್ರವಾಗಿ ಗಾಯವಾಗಿದೆ. ಆತನನ್ನು ಚಿಕಿತ್ಸೆಗೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಂಜೆ 4.30ರ ಸುಮಾರಿಗೆ ಮೃತ ಪಟ್ಟಿದ್ದಾನೆ.

ಈ ಕುರಿತು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ 279, 336, 283, 304 (ಎ) ಹಾಗೂ ಎಎಂವಿ ಕಾಯ್ದೆ 134 (ಎ ಮತ್ತು ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ.

ಅಕಾರಿಗಳಿಗೆ ಬಿಸಿ:
ರಸ್ತೆ ಕಾಮಗಾರಿ ಉಸ್ತುವಾರಿ ಹೊಂದಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿಯರ್ ಶ್ರೀಮತಿ ಸವಿತಾ ಅವರು ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ನಿರ್ಲಕ್ಷ್ಯತೆ ವಹಿಸಿದ್ದರಿರಿಂದ ಸವಾರ ಮೃತಪಟ್ಟಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ಸಂಜೆಗೆ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನಿಯಮಾನುಸಾರ ಇಂಜಿಯರ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿ, ಸರಕು ಸಾಗಾಣಿಕೆ 407 ವಾಹನದ ಚಾಲಕ ರವಿಯನ್ನು ಎರಡನೆ ಆರೋಪಿಯನ್ನಾಗಿಸಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರನ್ನು ಮೂರನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಅವರನ್ನು ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

Facebook Comments