ಬಿಬಿಎಂಪಿ ಕಸ ವಿಲೇವಾರಿಯಲ್ಲಿ ಬರೋಬ್ಬರಿ 400 ಕೋಟಿ ಗುಳುಂ..! ಸಿಐಡಿ ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Garbage-Bangaloreಬೆಂಗಳೂರು, ನ.2- ಹೈಕೋರ್ಟ್ ಚಾಟಿ ಬೀಸಿದ ನಂತರ ನಗರದ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ಬಿಬಿಎಂಪಿ ಇದೀಗ ಕಸದ ಮಾಫಿಯಾವನ್ನೇ ಬಗ್ಗುಬಡಿಯಲು ತೀರ್ಮಾನಿಸಿದೆ. ಕಸ ವಿಲೇವಾರಿಯಲ್ಲಿ ಗುತ್ತಿಗೆದಾರರು ನಡೆಸಿದ್ದಾರೆ ಎನ್ನಲಾದ 400 ಕೋಟಿ ರೂ. ಮೌಲ್ಯದ ಗೋಲ್‍ಮಾಲ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ.  ಕಸ ವಿಲೇವಾರಿಯಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತಂತೆ ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ನಂತರ ಪ್ರಕರಣವನ್ನು ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಗರದ ಕಸ ವಿಲೇವಾರಿ ಹೊಣೆ ಹೊತ್ತಿರುವ ಗುತ್ತಿಗೆದಾರರು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸಿಕೊಳ್ಳದೆ ಪಾಲಿಕೆ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಹೀಗಾಗಿ 400 ಕೋಟಿಗೂ ಹೆಚ್ಚು ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವುದು ಮತ್ತು ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

# ಏನಿದು ಅವ್ಯವಹಾರ..? 
ನಗರದಲ್ಲಿ ಪ್ರತಿನಿತ್ಯ ನಾಲ್ಕು ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಘಟಕಗಳಿಗೆ ಸಾಗಿಸುವ ಹೊಣೆಯನ್ನು ಗುತ್ತಿಗೆ ನೀಡಲಾಗಿದೆ.  ಕಸ ವಿಲೇವಾರಿಗೆಂದೇ ಗುತ್ತಿಗೆದಾರರು ಆಟೋ ಮತ್ತು ಟಿಪ್ಪರ್ ಸೇರಿದಂತೆ 3600 ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ.   ಕಸ ಸಾಗಿಸುವ ಒಂದು ಆಟೋಗೆ ಪ್ರತಿನಿತ್ಯ 60 ಸಾವಿರ ಹಾಗೂ ಒಂದು ಟಿಪ್ಪರ್‍ಗೆ ಒಂದೂವರೆ ಲಕ್ಷ ರೂ.ಗಳನ್ನು ಪಾಲಿಕೆ ಪಾವತಿಸುತ್ತಿದೆ. ಆದರೆ, ಕೆಲ ಗುತ್ತಿಗೆದಾರರು ವಾಹನಗಳ ತಪ್ಪು ಲೆಕ್ಕ ನೀಡಿ ಕೋಟ್ಯಂತರ ರೂಪಾಯಿ ಗುಳುಂ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕಸ ಸಾಗಿಸುವ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ಆದರೆ, 3600 ವಾಹನಗಳಲ್ಲಿ ಕೇವಲ 2600 ವಾಹನಗಳು ಮಾತ್ರ ಜಿಪಿಎಸ್ ಅಳವಡಿಸಿಕೊಂಡಿವೆ. ಉಳಿದ 1000 ವಾಹನಗಳು ಜಿಪಿಎಸ್ ಅಳವಡಿಸಿಕೊಳ್ಳದೆ ಹಣ ಪಡೆದುಕೊಂಡಿವೆ.  ಈ ಅವ್ಯವಹಾರದಲ್ಲಿ ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಇಡೀ ಪ್ರಕರಣವನ್ನು ತನಿಖೆಗೊಳಪಡಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿಕೊಂಡಿದ್ದರು.

# ಅವ್ಯವಹಾರ ಪತ್ತೆಯಾದದ್ದು ಹೇಗೆ?
ಕೆಲ ತಿಂಗಳುಗಳ ಹಿಂದೆ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಮುನಿರತ್ನ ಅವರು ತಾವು ಪ್ರತಿನಿಧಿಸುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜೆಪಿ ಪಾರ್ಕ್ ವಾರ್ಡ್‍ನಲ್ಲಿ ಕಸ ವಿಲೇವಾರಿ ಹೊಣೆ ಹೊತ್ತಿರುವ ಗುತ್ತಿಗೆದಾರ ವಾಹನಗಳ ತಪ್ಪು ಮಾಹಿತಿ ನೀಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದಾನೆ ಎಂದು ಆರೋಪಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಜೆಪಿ ಪಾರ್ಕ್ ಮಾತ್ರವಲ್ಲದೆ ಉಳಿದ ಎಲ್ಲ 198 ವಾರ್ಡ್‍ಗಳ ಕಸ ವಿಲೇವಾರಿ ಬಗ್ಗೆಯೂ ಎಸಿಬಿ ತನಿಖೆ ನಡೆಸುವ ಮುನ್ಸೂಚನೆ ನೀಡಿದ್ದರು.  ಜೆಪಿ ಪಾರ್ಕ್ ಪ್ರಕರಣದ ನಂತರ ನಗರದಲ್ಲಿ ಕಸ ಮಾಫಿಯಾ ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಸಿಐಡಿ ಮೂಲಕ ತನಿಖೆ ನಡೆಸಲಿದೆ ಎನ್ನಲಾಗಿದೆ.

# ಯಾವುದೇ ತನಿಖೆಗೂ ಸಿದ್ಧ:
ಕಸ ವಿಲೇವಾರಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ.ಗಳ ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಈ ಕುರಿತಂತೆ ಯಾವುದೇ ತನಿಖೆಗೂ ಸಿದ್ಧ ಎಂದು ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಈ ಸಂಜೆಗೆ ತಿಳಿಸಿದ್ದಾರೆ.  ಅಧಿಕಾರಿಗಳು ಮಾಡಿದ ತಪ್ಪನ್ನು ಮುಚ್ಚಿಹಾಕಲು ಗುತ್ತಿಗೆದಾರರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ತಪ್ಪು ಮಾಡಿದ ಗುತ್ತಿಗೆದಾರರ ವಿರುದ್ಧ ಇದುವರೆಗೂ ಏಕೆ ಕ್ರಮ ಕೈಗೊಂಡಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಬೇಕು. ಅದನ್ನು ಬಿಟ್ಟು ಈ ಅವ್ಯವಹಾರದಲ್ಲಿ ಎಲ್ಲ ಗುತ್ತಿಗೆದಾರರನ್ನು ತೇಜೋವಧೆ ಮಾಡುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಮೇಲೆ ಆರೋಪ ಹೊರಿಸಿ ಪಾಲಿಕೆಯಿಂದಲೇ ಕಸ ವಿಲೇವಾರಿ ವಾಹನಗಳನ್ನು ಖರೀದಿಸಿ ಕಮಿಷನ್ ಹೊಡೆಯುವ ಉದ್ದೇಶದಿಂದ ಅಧಿಕಾರಿಗಳು ಇಂತಹ ಹುನ್ನಾರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಕಸ ವಿಲೇವಾರಿ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ನಾನೇ ಇಂಪ್ಲೀಡ್ ಆಗಿ ಅಧಿಕಾರಿಗಳು ನಡೆಸುತ್ತಿರುವ ಅಂಧ ದರ್ಬಾರ್‍ಅನ್ನು ಬಹಿರಂಗಪಡಿಸುತ್ತೇನೆ ಎಂದು ಅವರು ಹೇಳಿದರು. ಕೆಎಸ್‍ಡಿಸಿ ಘಟಕದಲ್ಲಿ ಸಂಗ್ರಹವಾಗಿದ್ದ ಲಿಚೆಟ್ ಸಾಗಿಸಲು ಗಣ್ಯ ವ್ಯಕ್ತಿಯೊಬ್ಬರು ಸೂಚಿಸಿದ ವ್ಯಕ್ತಿಗೆ 14 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ. ಇದು ಅಧಿಕಾರಿಗಳ ಅವ್ಯವಹಾರವಲ್ಲವೆ ಎಂದು ಅವರು ಪ್ರಶ್ನಿಸಿದರು.
ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಕೆಲ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದು, ಅಧಿಕಾರಿಗಳ ಎಲ್ಲ ಕರ್ಮಕಾಂಡವನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿ ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸುವುದಾಗಿ ಬಾಲಸುಬ್ರಹ್ಮಣ್ಯಂ ತಿಳಿಸಿದರು.

 

Facebook Comments