ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳ ಪಟ್ಟಿ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ಅನಧಿಕೃತ ದೇವಾಲಯಗಳನ್ನು ತೆರವುಗೊಳಿಸುವುದಕ್ಕೆ ಸರ್ಕಾರ ಬ್ರೇಕ್ ಹಾಕಿರುವ ಬೆನ್ನಲ್ಲೇ ಬಿಬಿಎಂಪಿ ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳನ್ನು ಪಟ್ಟಿ ಮಾಡಿದೆ. ನಗರದಾದ್ಯಂತ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ತಲೆ ಎತ್ತಿರುವ 456 ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳ ಪಟ್ಟಿಯನ್ನು ರೆಡಿ ಮಾಡಿದೆ.

ಸುಪ್ರೀಂಕೋರ್ಟ್ ಸೂಚನೆಯಂತೆ 2009ರ ಮೊದಲು ಮತ್ತು ನಂತರ ತಲೆ ಎತ್ತಿರುವ ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ. 2009ಕ್ಕೂ ಮೊದಲು 5786 ಅನಧಿಕೃತ ಪೂಜಾ ಸ್ಥಳಗಳು ತಲೆ ಎತ್ತಿರುವುದನ್ನು ಬಿಬಿಎಂಪಿ ಗುರುತಿಸಿದೆ. 2009ಕ್ಕೂ ಮೊದಲು 1870ಕ್ಕೂ ಹೆಚ್ಚು ಪೂಜಾ ಸ್ಥಳಗಳು ಸರ್ಕಾರಿ ಭೂಮಿಯಲ್ಲಿ ತಲೆ ಎತ್ತಿವೆ. 2009ಕ್ಕೂ ಮೊದಲು 3916 ದೇಗುಲಗಳು ಅನಧಿಕೃತವಾಗಿ ಖಾಸಗಿ ಭೂಮಿಯಲ್ಲಿ ನಿರ್ಮಾಣಗೊಂಡಿವೆ.

5786 ದೇಗುಲಗಳ ಪೈಕಿ 5389 ಪೂಜಾ ಸ್ಥಳಗಳನ್ನು ಸಕ್ರಮಗೊಳಿಸಲಾಗಿದೆ. 132 ಪೂಜಾ ಸ್ಥಳಗಳಿಗೆ ಪರ್ಯಾಯ ಜಾಗ ನೀಡಿ ಸ್ಥಳಾಂತರ ಮಾಡಲಾಗಿದೆ. 265 ಪೂಜಾ ಸ್ಥಳಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. 2009ರ ನಂತರ ತಲೆ ಎತ್ತಿರುವ 620 ಪೂಜಾ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 411 ಸ್ಥಳಗಳನ್ನು ಸಕ್ರಮಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಉಳಿದಂತೆ 131 ಪೂಜಾ ಸ್ಥಳಗಳನ್ನು ತೆರವುಮಾಡಿಸಲು ಪಟ್ಟಿ ಸಿದ್ಧಪಡಿಸಿದೆ.

18 ದೇಗುಲಗಳಿಗೆ ಪರ್ಯಾಯ ಸ್ಥಳ ನೀಡಿ ಸ್ಥಳಾಂತರ ಮಾಡಲು ಪಟ್ಟಿ ಮಾಡಲಾಗಿದೆ. 2021ರ ಫೆಬ್ರವರಿಯಲ್ಲಿ ಬಿಬಿಎಂಪಿ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಕೆಡವಿದ ನಂತರ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಹಿಂದೂ ಸಂಘಟನೆಗಳು, ಸಾರ್ವಜನಿಕರು ಸ್ಥಳೀಯ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಗುಲಗಳ ತೆರವಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದರು. ಮುಖ್ಯಮಂತ್ರಿಗಳ ನಿರ್ಧಾರದ ನಂತರ ಬಿಬಿಎಂಪಿ ಸಿದ್ಧಪಡಿಸಿದ ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳ ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ ಯಥಾಸ್ಥಿತಿ ಮುಂದುವರಿಯಲಿದೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಲಿದೆಯೋ ಕಾದು ನೋಡಬೇಕಿದೆ.

Facebook Comments