ಮಾರ್ಷಲ್‍ಗಳ ದಂಡ ಪ್ರಯೋಗಕ್ಕೆ ಸಾರ್ವಜನಿಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.3- ಯಾವುದೇ ಆಳುವ ಸರ್ಕಾರಗಳು ದಂಡ ಪ್ರಯೋಗ ಮಾಡುವುದನ್ನೇ ಮಾನದಂಡ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು. ತಮ್ಮ ಹಿತಾಸಕ್ತಿ ಕಾಯುವ ಚುನಾವಣೆ ಸಂದರ್ಭದಲ್ಲಿ ಮಾತ್ರ ನಿಯಮಗಳನ್ನು ನಿರ್ಲಕ್ಷಿಸಿ ಸಾಮಾನ್ಯ ಸಂದರ್ಭದಲ್ಲಿ ಬೇಕಾದಂತೆ ದಂಡ ವಿಧಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 20 ದಿನಗಳಿಂದ ಬೆಂಗಳೂರಿನ ಆರ್‍ಆರ್‍ನಗರದಲ್ಲಿ ಉಪಚುನಾವಣಾ ಕಣದಲ್ಲಿ ಅಬ್ಬರದ ಪ್ರಚಾರ ನಡೆಯಿತು. ಪ್ರಭಾವಿ ನಾಯಕರು, ಸ್ಟಾರ್ ನಟರು, ರ್ಯಾಲಿ, ಮೆರವಣಿಗೆ ನಡೆಸಿದಾಗ ಸಹಸ್ರಾರು ಜನ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಯಾರು ಮಾಸ್ಕ್ ಹಾಕಿದ್ದರು? ಯಾವ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು? ಎಂಬುದನ್ನು ಯಾವ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್‍ಗಳು ಗಮನಿಸಲಿಲ್ಲ. ಯಾರಿಗೂ ದಂಡ ವಿಧಿಸಲಿಲ್ಲ.

ಪ್ರತಿ ದಿನ ಇಲ್ಲಿ ಸಾವಿರಾರು ಜನರೊಂದಿಗೆ ಬೃಹತ್ ಮೆರವಣಿಗೆ, ರ್ಯಾಲಿಗಳು ನಡೆದವು. ಯಾವ ಆರೋಗ್ಯ ನಿಯಮ, ಮಾರ್ಗಸೂಚಿಗಳು ಕೂಡ ಪಾಲನೆಯಾಗಿದ್ದು ಕಂಡು ಬರಲಿಲ್ಲ. ಖುದ್ದು ಬಿಬಿಎಂಪಿ ಆಯುಕ್ತರೇ ಚುನಾವಣಾ ಜಿಲ್ಲಾಧಿಕಾರಿಯಾಗಿದ್ದರೂ ಇವರ ಸುಪರ್ದಿ ಯಲ್ಲಿ ಮಾರ್ಷಲ್‍ಗಳು ಇದ್ದರೂ ಕೂಡ ದಂಡ ಪ್ರಯೋಗ ಆಗಲಿಲ್ಲ. ಆದರೆ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸದವರಿಂದ ದಂಡ ವಸೂಲಿಗಿಳಿದಿರುವ ಮಾರ್ಷಲ್‍ಗಳಿಂದ ಸಾರ್ವಜನಿಕರಿಗೆ ಮಾತ್ರ ಪ್ರತಿದಿನ ಕಿರಿಕಿರಿ ತಪ್ಪಿಲ್ಲ. ದಿನ ಬೆಳಗಾದರೆ ತಮ್ಮ ಕೆಲಸಗಳಿಗೆ ಹೋಗುವುದು ಬಿಟ್ಟು ಮಾರ್ಷಲ್‍ಗಳೊಂದಿಗೆ ಸಂಘರ್ಷಕ್ಕಿಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಸಾಂಕ್ರಾಮಿಕ ರೋಗ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಮಾಸ್ಕ್ ಧರಿಸದವರಿಗೆ 1000 ರೂ. ದಂಡ ಪ್ರಯೋಗ ಜಾರಿಗೊಳಿಸಿ ಸಾರ್ವಜನಿಕ ಆಕ್ಷೇಪಕ್ಕೆ ಗುರಿಯಾಯಿತು. ಮಾಧ್ಯಮಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದಾಗ ದಂಡದ ಪ್ರಮಾಣವನ್ನು 200 ರೂ.ಗಳಿಗೆ ಇಳಿಸಿತು. ನಗರದಲ್ಲಿ ಸುಮಾರು 12 ತಂಡಗಳ 2000 ಮಾರ್ಷಲ್‍ಗಳು ಕಳೆದ ಒಂದೂವರೆ ತಿಂಗಳಿನಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ.

ನಗರದ ಆಯಾಕಟ್ಟಿನ ಜಾಗಗಳಲ್ಲಿ ನಿಂತು ಮುಖದ ಮೇಲಿರುವ ಮಾಸ್ಕ್ ಸ್ವಲ್ಪ ಕೆಳಗೆ ಜಾರಿದ್ದರೂ ದಂಡದ ಪ್ರಯೋಗ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ಪ್ರಬಲ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಯಾವುದೇ, ಎಷ್ಟೇ ಆರೋಪ, ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದರೂ ಈ ಮಾರ್ಷಲ್‍ಗಳು ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡುತ್ತಾರೆ.

ಮಾರ್ಷಲ್‍ಗಳು ಹಾಗೂ ಸಾರ್ವಜನಿಕರೊಂದಿಗೆ ಸಾಕಷ್ಟು ಗಲಾಟೆಯೇ ನಡೆದು ಹೋಗಿದೆ. ದ್ವಿಚಕ್ರ ವಾಹನಗಳಲ್ಲಿ ಚಲಿಸುವವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ದಂಡ ವಸೂಲಿ ಮಾಡುವುದು ಒಂದೆಡೆಯಾದರೆ ಕಾರಿನಲ್ಲಿ ಪ್ರಯಾಣಿಸುವವರು ಕೂಡ ಮಾಸ್ಕ್ ಧರಿಸದಿದ್ದರೆ ದಂಡ ಕಟ್ಟಬೇಕು. ಅದು ಒಂಟಿಯಾಗಿದ್ದರೂ ಕೂಡ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.

ಆರಂಭದಲ್ಲೇ ಸಾಕಷ್ಟು ಆರೋಪ, ಆಕ್ಷೇಪ ಕೇಳಿಬಂದವಾದರೂ ಸರ್ಕಾರ ದಂಡದ ಕ್ರಮದಿಂದ ಹಿಂದೆ ಸರಿದಿಲ್ಲ. ವ್ಯಾಪಕ ವಿರೋಧದ ನಡುವೆಯೂ ದಂಡ ವಸೂಲಿ ಮಾಡುತ್ತಲೇ ಬಂದಿದೆ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ದಂಡ ಕಟ್ಟುತ್ತಿದ್ದಾರೆ. ಒಪೆÇ್ಪತ್ತಿನ ಊಟಕ್ಕಿಲ್ಲದವರು, ಅಂದಂದೇ ದುಡಿದು ತಿನ್ನುವವರು, ಫುಟ್‍ಪಾತ್ ವ್ಯಾಪಾರಿಗಳು, ತಳ್ಳುಗಾಡಿಯವರು ಹೀಗೆ ಬಹುತೇಕ ಬಡವರ್ಗದವರು ಮಾರ್ಷಲ್‍ಗಳಿಗೆ ಗುರಿಯಾಗುತ್ತಾರೆ.

ಹಣ ಕಟ್ಟಲಾರದೆ ಸಂಘರ್ಷಕ್ಕಿಳಿಯುತ್ತಾರೆ. ಕೊರೊನಾ ಸೋಂಕಿಗೆ ಇನ್ನು ಯಾವುದೇ ಲಸಿಕೆ ಬಂದಿಲ್ಲ ನಿಜ. ಸೋಂಕು ನಿವಾರಣೆಗೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು.

ಅದನ್ನು ಬಿಟ್ಟು ನಿರಂತರ ದಂಡಂ ದಶಗುಣಂ ಎಂಬ ಪ್ರಯೋಗಕ್ಕೆ ಮುಂದಾಗುವುದು ಎಷ್ಟು ಸರಿ ಎಂದು ಸರ್ಕಾರವನ್ನು ನಿತ್ಯ ಶಪಿಸುತ್ತಲೇ ಹಲವರು ದಂಡ ಕಟ್ಟುತ್ತಾರೆ. ಗ್ಲಾಸ್ ಹಾಕಿ ಕಾರಿನೊಳಗೆ ಕುಳಿತುಕೊಂಡ ನಾವು ಕೂಡ ದಂಡ ಕಟ್ಟಬೇಕೆಂದರೆ ಹೇಗೆ ಎಂದು ನವರಂಗ್ ವೃತ್ತದ ಬಳಿ ಮಾರ್ಷಲ್‍ಗಳೊಂದಿಗೆ ಜಗಳಕ್ಕಿಳಿದ ಕೆಲವರು ಹೇಳಿದ್ದಾರೆ.

ನಗರದ ಬಹುತೇಕ ಕಡೆ ಇಂಥ ಪ್ರಕರಣಗಳು ನಡೆದಿವೆ. ಮಾರ್ಷಲ್‍ಗಳು ಕೂಡ ಏನೂ ಮಾಡಲಾರದ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಸರ್ಕಾರ ಹೇಳಿದ ಕೆಲಸವನ್ನು ನಾವು ಮಾಡಬೇಕಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಈವರೆಗೆ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಯಮ ಉಲ್ಲಂಘಿಸಿದವರಿಂದ ಸುಮಾರು 4.5 ಕೋಟಿಯಷ್ಟು ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಧರಿಸದ 1,59,448 ಮಂದಿಗೆ ಮಾರ್ಷಲ್‍ಗಳು 200 ರೂ.ನಂತೆ 3.5 ಕೋಟಿ ದಂಡ ವಸೂಲಿ ಮಾಡಿದ್ದಾರೆ. 18,239 ಜನರಿಂದ 39.19 ಲಕ್ಷ ದಂಡವನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನರಿಂದ ವಸೂಲಿ ಮಾಡಲಾಗಿದೆ.

ಉಪಚುನಾವಣೆ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದವರಿಂದ ದಂಡ ವಸೂಲಿ ಮಾಡಿದ್ದರೆ ಮತ್ತಷ್ಟು ಕೋಟ್ಯಂತರ ರೂ. ವಸೂಲಿ ಮಾಡಬಹುದಿತ್ತು. ಆದರೆ ಸರ್ಕಾರ ಜನಸಾಮಾನ್ಯರಿಗೆ ಒಂದು ನ್ಯಾಯ, ಚುನಾವಣಾ ಹಿತಾಸಕ್ತಿಗೆ ಮತ್ತೊಂದು ನ್ಯಾಯವೇ ಎಂದು ಆರೋಪ, ಆಕ್ರೋಶ ದಂಡ ಕಟ್ಟುವವರಿಂದ ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟವರೇ ಉತ್ತರಿಸಬೇಕು.

ಸಾರ್ವಜನಿಕರಿಂದ ವಸೂಲಿ ಮಾಡಿರುವ 4.5 ಕೋಟಿಯಷ್ಟು ಹಣದಲ್ಲಿ ಮಾಸ್ಕ್‍ಗಳನ್ನು ಖರೀದಿಸಿ ಉಚಿತವಾಗಿಯಾದರೂ ವಿತರಿಸಬಹುದು. ಈ ಮೂಲಕವಾದರೂ ಸರ್ಕಾರ ಸಾರ್ವಜನಿಕರ ಪರವಾಗಿ ನಿಲ್ಲಬಹುದು. ಇನ್ನು ಮುಂದಾದರೂ ಸಾರ್ವಜನಿಕರಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಬಹುದಲ್ಲವೇ…?

#ಕೆ.ಎಸ್.ಜನಾರ್ದನ್

Facebook Comments