ಬಿಬಿಎಂಪಿ ಬಜೆಟ್‍ಗೆ ಅನುಮತಿನೀಡುವಂತೆ ಸಿಎಂ ಬಳಿ ಮೇಯರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.14- ತಡೆಹಿಡಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್‍ಗೆ ಅನುಮತಿ ನೀಡಬೇಕೆಂದು ಮೇಯರ್ ಗಂಗಾಂಬಿಕೆ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮೇಯರ್ ಗಂಗಾಂಬಿಕೆ, ಬಜೆಟ್ ತಡೆ ಹಿಡಿದಿರುವ ಕಾರಣ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಪಾಲಿಕೆಯ ಸಿಬ್ಬಂದಿಗೂ ವೇತನ ನೀಡಲು ಸಮಸ್ಯೆಯಾಗಿದೆ. ಕೂಡಲೇ ಬಜೆಟ್‍ಗೆ ಅನುಮೋದನೆ ನೀಡಬೇಕೆಂದು ಕೋರಿದರು. ಬಜೆಟ್ ತಡೆಹಿಡಿದಿರುವ ಕಾರಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಾಜಕಾಲುವೆಗಳ ಹೂಳೆತ್ತುವುದು, ಚರಂಡಿಗಳ ಸ್ವಚ್ಛತೆ, ಸಿಬ್ಬಂದಿ ಮತ್ತು ಪೌರಕಾರ್ಮಿಕರ ವೇತನ ನಿರ್ವಹಣೆ ಮಾಡುವುದು ಸಮಸ್ಯೆಯಾಗಿದೆ. ಕೂಡಲೇ ಬಜೆಟ್‍ಗೆ ಸಮ್ಮತಿ ನೀಡುವಂತೆ ಮೇಯರ್ ವಸ್ತುಸ್ಥಿತಿಯನ್ನು ವಿವರಿಸಿದರು.

ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ, ಆದಷ್ಟು ಶೀಘ್ರ ಬಜೆಟ್‍ಗೆ ಅನುಮೋದನೆ ನೀಡಿ ನಗರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವೆ. ಇದನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿದಿಲ್ಲ.

ಪಾಲಿಕೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನಾನೇ ಸೂಚನೆ ಕೊಟ್ಟಿದ್ದೆ. ವೈಟ್‍ಟಾಪಿಂಗ್, ತುಂಡುಗುತ್ತಿಗೆ, ರಾಜಕಾಲುವೆ ಹೂಳೆತ್ತುವುದು, ರಸ್ತೆಗಳ ಕಾಮಗಾರಿ, ಅಂಡರ್‍ಪಾಸ್ ನಿರ್ಮಾಣ, ಫ್ಲೈಓವರ್ ಕಾಮಗಾರಿ ಸೇರಿದಂತೆ ಬಿಬಿಎಂಪಿಯ ಬಹುತೇಕ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಅಧಿಕಾರಿಗಳು ನೀಡುತ್ತಿರುವ ಲೆಕ್ಕಕ್ಕೂ ನಡೆಯುತ್ತಿರುವ ಕಾಮಗಾರಿಗೂ ಅಜಗಜಾಂತರದ ವ್ಯತ್ಯಾಸವಿದೆ. ಹೀಗಾಗಿ ಇದನ್ನು ತಡೆಹಿಡಿದಿದ್ದೆ. ಆದಷ್ಟು ಬೇಗ ಅನುಮತಿ ನೀಡುತ್ತೇನೆ ಎಂದು ಯಡಿಯೂರಪ್ಪ ಮೇಯರ್‍ಗೆ ಭರವಸೆ ನೀಡಿದ್ದಾರೆ.

ಬಳಿಕ ಮಾತನಾಡಿದ ಮೇಯರ್, ಬಿಬಿಎಂಪಿ ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಬಜೆಟ್ ಅನುಮೋದನೆಗೆ ಸಾಕಾರಾತ್ಮವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಅನುಮೋದನೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin