ಬೆಂಗಳೂರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರಿನ ಬಳಕೆ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12- ನಗರದಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಕೆ ಮಾಡುವ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗೌತಮ್‍ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಮಾಡುವ ಸಂದರ್ಭದಲ್ಲಿ ಕಟ್ಟಡ ಕಟ್ಟಲು ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಕೆ ಮಾಡಬೇಕು ಎಂದು ಷರತ್ತು ವಿಧಿಸುವಂತೆ ಬಿಡಬ್ಲ್ಯುಎಸ್‍ಎಸ್‍ಬಿ ಅಧಿಕಾರಿಗಳು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಲಮಂಡಳಿಗೆ ಪತ್ರ ಬರೆದು ಬೆಂಗಳೂರು ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಗೆ ಅಂತರ್ಜಲ ಮತ್ತು ಕಾವೇರಿ ನೀರನ್ನು ಬಳಕೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.ಇದರ ಜತೆಗೆ ಕಟ್ಟಡ ಕಟ್ಟಲು ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಿಕೊಳ್ಳುವಂತೆ ಕಾನೂನು ರೂಪಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಬಿಬಿಎಂಪಿಗೆ ಪತ್ರ ಬರೆದು ನಕ್ಷೆ ಮಂಜೂರಾತಿ ಸಂದರ್ಭದಲ್ಲಿ ಸಂಸ್ಕರಿಸಿದ ನೀರು ಬಳಕೆ ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

200 ಚದರ ಮೀಟರ್ ವಿಸ್ತೀರ್ಣಕ್ಕಿಂತ ಮೇಲ್ಪಟ್ಟ ಕಟ್ಟಡಗಳಿಗೆ ಜಲಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ಸಂದರ್ಭದಲ್ಲಿ ಕಟ್ಟಡ ನಿರ್ಮಿಸಲು ಅಗತ್ಯವಿರುವ ಸಂಸ್ಕರಿಸಿದ ನೀರು ಬಳಕೆ ಮಾಡಿಕೊಳ್ಳಲು ಹಾಗೂ ಅದಕ್ಕೆ ತಗುಲುವ ವೆಚ್ಚವನ್ನು ಪಾವತಿಸಿದರೆ ಮಾತ್ರ ಅನುಮತಿ ನೀಡಲಾಗುವುದು.

ಅದೇ ರೀತಿ ಬಿಬಿಎಂಪಿ ವತಿಯಿಂದ ನಕ್ಷೆ ಮಂಜೂರಾತಿ ಮಾಡಿರುವ ಸಂದರ್ಭದಲ್ಲಿ ಜಲಮಂಡಳಿಯಿಂದ ಸಂಸ್ಕರಿಸಿದ ನೀರು ಬಳಕೆ ಮಾಡಿಕೊಳ್ಳಲು ಹಣ ಪಾವತಿಸಿರುವ ರಸೀದಿಯನ್ನು ಸಲ್ಲಿಸಿದರೆ ಮಾತ್ರ ನಕ್ಷೆ ಮಂಜೂರು ಮಾಡುವಂತೆ ಬಿಡಬ್ಲ್ಯುಎಸ್‍ಎಸ್‍ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜಲಮಂಡಳಿಯ ಈ ತೀರ್ಮಾನ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸ್ಪಷ್ಟನೆ ನೀಡಿದ್ದಾರೆ.

Facebook Comments

Sri Raghav

Admin