ಬಿಬಿಎಂಪಿ ಮೇಯರ್ ಗಂಗಾಂಬಿಕೆಗೊ ಶ್ವಾನ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ನಗರದಲ್ಲಿ ಇತ್ತೀಚೆಗೆ ನಾಯಿಗಳ ಕಾಟ ವಿಪರೀತವಾಗಿದ್ದು, ಇಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೂ ಶ್ವಾನಗಳ ಹಿಂಡು ಕಾಡಿದವು… ಇಂದು ಬೆಳಗ್ಗೆ ಮೇಯರ್ ನೀಲಸಂದ್ರದಲ್ಲಿರುವ ಪಾಲಿಕೆಯ ಬಾಲಕರ ಶಾಲೆಗೆ ಭೇಟಿ ನೀಡಲು ಹೋಗಿದ್ದರು. ಆಗ ಏಕಾಏಕಿ 30ಕ್ಕೂ ಹೆಚ್ಚು ನಾಯಿಗಳು ಇವರತ್ತ ದಾವಿಸಿದವು. ಇದರಿಂದ ಒಂದು ಕ್ಷಣ ಗಂಗಾಂಬಿಕೆ ಬೆಚ್ಚಿಬಿದ್ದರು.

ಶಾಲೆ ಸುತ್ತ ಎಲ್ಲಿ ನೋಡಿದರೂ ನಾಯಿಗಳೇ ಕಾಣಿಸಿದವು. ಇದರಿಂದ ಗಾಬರಿಗೊಂಡ ಅವರು ಕೂಡಲೇ ಇವುಗಳನ್ನು ಹಿಡಿಯುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಈ ಎಲ್ಲ ನಾಯಿಗಳನ್ನು ಹಿಡಿದು ಕೂಡಲೇ ಎಬಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿ ಎಂದು ಆದೇಶಿಸಿದರು.  ಶೀಘ್ರವೇ ಈ ಶಾಲೆಗೆ ಕಾಂಪೌಂಡ್ ನಿರ್ಮಿಸಿ ಮೆಷ್ ಹಾಕಿಸಿ ಗೇಟ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆ ಮಕ್ಕಳಿಗೆ ನಾಯಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಇದರಿಂದ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಮೇಯರ್ ಸಮ್ಮುಖದಲ್ಲೇ ಬಲೆಗಳನ್ನು ತಂದು ನಾಯಿಗಳನ್ನು ಹೊರಸಾಗಿಸಿದರು.  ಮಟನ್ ಶಾಪ್‍ಗಳಿಗೆ ಬೀಗ ಜಡಿಯಿರಿ: ಪರವಾನಗಿ ಇಲ್ಲದ ಮಟನ್ ಶಾಪ್‍ಗಳಿಗೆ ಮುಲಾಜಿಲ್ಲದೆ ಬೀಗ ಜಡಿಯಿರಿ… ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಲೈಸೆನ್ಸ್ ಇರುವ ಮಳಿಗೆಗಳ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಪಾಲಿಕೆಯ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇತ್ತೀಚೆಗೆ ಆಸ್ಟಿಂಗ್‍ಟೌನ್ ಬಳಿಯ ರೋಸ್‍ಗಾರ್ಡನ್‍ನಲ್ಲಿ ನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿರುವ ಬಾಲಕಿ ಅನುಪಮಾ ಮನೆಗೆ ಭೇಟಿ ನೀಡಿ ಕುಟುಂಬವರ್ಗದವರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ನಾಯಿ ಕಚ್ಚಿ ಗಾಯಗೊಂಡಿರುವ ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ ಎಂದು ಭರವಸೆ ನೀಡಿದರು.

ಮಾಂಸದ ಮಳಿಗೆಯವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಇದರಿಂದಾಗಿ ನಾಯಿಗಳ ಉಪಟಳ ಹೆಚ್ಚಾಗಿದೆ. ಎರಡು ತಿಂಗಳ ಹಿಂದೆಯೇ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿದ್ದೆ. ಆದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿಬಿಎಂಪಿ ಪಶು ಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಶಶಿಕುಮಾರ್ ಅವರಿಗೆ ಕೂಡಲೇ ಪರವಾನಗಿ ಇಲ್ಲದ ಮಾಂಸದ ಮಳಿಗೆಗಳಿಗೆ ಬೀಗ ಹಾಕಿಸಿ, ಪರವಾನಗಿ ಇರುವವರು ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಒಂದು ವೇಳೆ ತ್ಯಾಜ್ಯವನ್ನು ಹೊರಸಾಗಿಸದೆ ಅಲ್ಲಲ್ಲೇ ಎಸೆದರೆ ಇಂತಹ ಅಂಗಡಿಗಳಿಗೂ ಬೀಗ ಹಾಕಿಸಿ ಎಂದು ಆದೇಶಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ