ಬಿಬಿಎಂಪಿ ಮೇಯರ್-ಉಪಮೇಯರ್ ಎಲೆಕ್ಷನ್ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.23- ಸೆಪ್ಟೆಂಬರ್ 27ಕ್ಕೆ ನಿಗದಿಯಾಗಿದ್ದ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆಯಾಗಿದೆ. ಮೆಯರ್ , ಉಪಮೇಯರ್ ಚುನಾವಣೆ ಜೊತೆಗೆ ಸ್ಥಾಯಿ ಸಮಿತಿಗಳಿಗೂ ಒಟ್ಟಿಗೆ ಚುನಾವಣೆ ನಡೆಸಬೇಕಾಗಿರುವುದರಿಂದ ಅ.4ಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರತಿ ಬಾರಿ ಮೇಯರ್ , ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೂ ಚುನಾವಣೆ ನಡೆಯುತ್ತಿತ್ತು. ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರ ಅವಧಿಯು ಒಂದು ವರ್ಷಕ್ಕೆ ನಿಗದಿಯಾಗಿರುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಏರುಪೇರಾಗಿತ್ತು.  ಪ್ರಸ್ತುತ ಬಿಬಿಎಂಪಿಯಲ್ಲಿ ರಾಜಕೀಯ ಬದಲಾವಣೆಗಳಾಗಿದ್ದು, ಹಾಲಿ ಇರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಬದಲಾಗಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ.

ಪ್ರಸ್ತುತ ಇರುವ ಸ್ಥಾಯಿಸಮಿತಿಗಳ ಅಧ್ಯಕ್ಷರು, ಸದಸ್ಯರ ಅವಧಿ ಡಿಸೆಂಬರ್‍ವರೆಗೆ ಮುಂದುವರೆಯುತ್ತದೆ. ಈ ರೀತಿಯಾದರೆ ಹೊಸದಾಗಿ ಅಧಿಕಾರಕ್ಕೆ ಬರುವ ಬಿಜೆಪಿ ಸದಸ್ಯರಿಗೆ ಆಡಳಿತದ ಅವಧಿ ಕಡಿಮೆಯಾಗುತ್ತದೆ. ಹೀಗಾಗಿ ಪ್ರತಿಪಕ್ಷದ ನಾಯಕರಾಗಿರುವ ಪದ್ಮನಾಭ ರೆಡ್ಡಿ ಅವರು 1998 ಮತ್ತು 2010ರ ಕಾಯ್ದೆಯನ್ನು ಉಲ್ಲೇಖಿಸಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು, ಮೇಯರ್, ಉಪಮೇಯರ್ ಆಯ್ಕೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯನ್ನು ಮಾಡಬೇಕೆಂದು ಮನವಿ ಮಾಡಿದ್ದಾರೆ.

ಆಡಳಿತ ಪಕ್ಷದ ಅಧ್ಯಕ್ಷರಾದ ಅಬ್ದುಲ್ ವಾಜೀದ್ ಅವರು ಹಾಲಿ ಸ್ಥಾಯಿ ಸಮಿತಿಗಳ ಸದಸ್ಯರ ಅವಧಿ ಡಿಸೆಂಬರ್‍ವರೆಗೆ ಇದ್ದು ಈ ಹಿಂದೆ ಆಯ್ಕೆ ಮಾಡುವಾಗ ಪ್ರಾದೇಶಿಕ ಆಯುಕ್ತರು ನಮಗೆ ಒಂದು ವರ್ಷದ ಅವಧಿ ನಿಗದಿ ಮಾಡಿದ್ದರು. ಈಗ ಅವಧಿಗೆ ಮುನ್ನ ನಮ್ಮನ್ನು ತೆಗೆದರೆ ನಮ್ಮ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು.

ಈ ಎರಡೂ ಮನವಿಗಳನ್ನು ಸ್ವೀಕರಿಸಿದ ಆಯುಕ್ತರು, ಕಾನೂನು ಘಟಕಕ್ಕೆ ಕಳುಹಿಸಿಕೊಟ್ಟಿದ್ದರು. ಎಲ್ಲ ಅಂಶಗಳನ್ನು ಪರಾಮರ್ಶಿಸಿದ ಕಾನೂನು ಘಟಕ, ಮೇಯರ್, ಉಪಮೇಯರ್ ಚುನಾವಣಾ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸಲು ಸಮ್ಮತಿ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ತಯಾರಿ ನಡೆಸಿದೆ. ಒಂದು ವಾರ ಮುಂದೆ ಎಲ್ಲರಿಗೂ ನೋಟಿಸ್ ನೀಡಬೇಕಾಗುತ್ತದೆ. ಹಾಗಾಗಿ ಬಹುತೇಕ ಅ.4ರೊಳಗೆ ಬಿಬಿಎಂಪಿ ಮೇಯರ್ -ಉಪಮೇಯರ್ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಂದೇ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಯಲಿದೆ.

Facebook Comments

Sri Raghav

Admin