ಬಿಬಿಎಂಪಿ ಮೇಯರ್ , ಉಪ ಮೇಯರ್ ಚುನಾವಣೆ ಮುಂದೂಡಿಕೆ..?
ಬೆಂಗಳೂರು, ಸೆ.28- ಬಿಜೆಪಿ ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರ ಕಗ್ಗಂಟಾಗುತ್ತಿದ್ದಂತೆ ಅ.1ರಂದು ನಡೆಸಲು ಉದ್ದೇಶಿಸಿದ್ದ ಬಿಬಿಎಂಪಿ ಮೇಯರ್ , ಉಪ ಮೇಯರ್ ಚುನಾವಣೆ ಮುಂದೂಡುವ ಸಾಧ್ಯತೆಗಳಿವೆ. ಮೇಯರ್ ಅಭ್ಯರ್ಥಿ ಆಯ್ಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಚಿಸಿದ್ದ ಶಾಸಕ ರಘು ನೇತೃತ್ವದ ಸಮಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ರದ್ದುಪಡಿಸುತ್ತಿದ್ದಂತೆ ಆ ಪಕ್ಷದಲ್ಲಿ ಆಂತರಿಕ ಕಚ್ಚಾಟ ಉಲ್ಭಣಗೊಂಡಿದೆ.
ಹೀಗಾಗಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅ.1ರಂದು ನಡೆಸಬೇಕಿದ್ದ ಮೇಯರ್ ಚುನಾವಣೆಯನ್ನು 15 ದಿನಗಳ ಮಟ್ಟಿಗೆ ಮುಂದೂಡುವ ಬಗ್ಗೆ ಬಿಜೆಪಿ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ.
ಕೂಡಲೇ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಿಗೆ ಪತ್ರ ಬರೆದು ಮೇಯರ್ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿಕೊಳ್ಳಲು ಬಿಜೆಪಿ ಮುಖಂಡರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಎಸ್ವೈ ಸೂಚಿಸಿದ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡಲು ಕಟೀಲ್ ಒಪ್ಪುತ್ತಿಲ್ಲ. ಕಟೀಲ್ ಸೂಚಿಸುವ ಅಭ್ಯರ್ಥಿಗೆ ಮಣೆ ಹಾಕಿದರೆ ತನ್ನ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎನ್ನುವುದು ಯಡಿಯೂರಪ್ಪ ಅವರ ಧೋರಣೆ.
ಮೇಯರ್ ಆಯ್ಕೆ ಕುರಿತಂತೆ ಪಕ್ಷದ ಮುಖಂಡರು ಹಲವಾರು ಸುತ್ತಿನ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ , ಕಾಡು ಮಲ್ಲೇಶ್ವರ ವಾರ್ಡ್ನ ಹಿರಿಯ ಸದಸ್ಯ ಮಂಜುನಾಥ್ ರಾಜು, ಗೋವಿಂದರಾಜನಗರ ವಾರ್ಡ್ನ ಉಮೇಶ್ ಶೆಟ್ಟಿ , ಜಕ್ಕೂರು ವಾರ್ಡ್ನ ಮುನೀಂದ್ರಕುಮಾರ್, ಕುಮಾರಸ್ವಾಮಿ ಬಡಾವಣೆಯ ಎಲ್.ಶ್ರೀನಿವಾಸ್ ಮತ್ತಿತರರು ಮೇಯರ್ ರೇಸ್ನಲ್ಲಿದ್ದರು.
ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಎರಡು ಬಣದವರು ಒಪ್ಪುತ್ತಿಲ್ಲ. ಹೀಗಾಗಿ ಎಚ್ಎಸ್ಆರ್ ಲೇ ಔಟ್ನ ಗುರುಮೂರ್ತಿ ರೆಡ್ಡಿ, ನಾಗರಬಾವಿ ವಾರ್ಡ್ನ ಮೋಹನ್ಕುಮಾರ್ ಅವರ ಹೆಸರುಗಳು ಮೇಯರ್ ಆಯ್ಕೆಗೆ ಪ್ರಸ್ತಾಪವಾಯಿತು.
ಆದರೂ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಸಹ ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆಯನ್ನೇ ನಿರ್ದಿಷ್ಟ ಅವಧಿಗೆ ಮುಂದೂಡುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.