‘ಬೃಹತ್’ ಫೈಟ್ : ರಣರಂಗವಾಯ್ತು ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-09-28 at 11.50.27 AM

ಬೆಂಗಳೂರು,ಸೆ.28- ಇಂದು ನಡೆದ ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಬಿಬಿಎಂಪಿ ಪೌರಸಭಾಂಗಣದಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಬೃಹತ್ ಫೈಟೇ ನಡೆಯಿತು. ಪರಸ್ಪರ ಕೈ ಕೈ ಮಿಲಾಯಿಸಿ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ಮೇಯರ್, ಉಪಮೇಯರ್ ಚುನಾವಣೆಗೆ ಪಕ್ಷೇತರರನ್ನು ಕರೆ ತರುವ ಸಂದರ್ಭದಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷೇತರ ಸದಸ್ಯರನ್ನು ಪರಸ್ಪರ ಎಳೆದಾಡಿದ ಪ್ರಸಂಗ ನಡೆದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು, ಶಾಸಕರ ನಡುವೆ ಗದ್ದಲ ಗಲಾಟೆ ಉಂಟಾಯಿತು. ಅಧಿಕಾರಿಗಳು ಮೂಕಪ್ರೇಕ್ಷಕರಾದರು. ನಿಗದಿಯಂತೆ ಬಿಬಿಎಂಪಿ ಮೇಯರ್ ಚುನಾವಣೆ ಘೋಷಣೆಯಾಯಿತು. ಬಿಬಿಎಂಪಿ ಸದಸ್ಯರು ಒಬ್ಬೊಬ್ಬರೇ ಬಂದು ತಮ್ಮ ಸ್ಥಾನಗಳಲ್ಲಿ ಆಸೀನರಾಗುತ್ತಿದ್ದರು. ಅದರಂತೆ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಬಂದು ಕುಳಿತುಕೊಳ್ಳುತ್ತಿದ್ದರು.

WhatsApp Image 2018-09-28 at 11.50.17 AM

ಈ ಸಂದರ್ಭದಲ್ಲಿ ಶಾಸಕ ಆರ್.ಅಶೋಕ್ ಜೊತೆ ಜೆಡಿಎಸ್‍ನ ದೇವದಾಸ್, ಮಂಜುಳಾ ನಾರಾಯಣಸ್ವಾಮಿ, ಆನಂದ್, ರಮೇಶ್‍ರೆಡ್ಡಿ ಅವರ ಜೊತೆ ಆಗಮಿಸಿದಾಗ ಜೆಡಿಎಸ್ ಹಾಗೂ ಪಕ್ಷೇತರರನ್ನು ಹೈಜಾಕ್ ಮಾಡಿ ಕರೆತರುತ್ತಿದ್ದಾರೆ ಎಂದು ರೊಚ್ಚುಗೆದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲ ಸದಸ್ಯರು ಮತ್ತು ಶಾಸಕರು ಅವರತ್ತ ತೆರಳಿ ಎಳೆದಾಡಲು ಪ್ರಾರಂಭಿಸಿದರು.

ಒಂದು ಹಂತದಲ್ಲಿ ದೇವದಾಸ್ ಅವರನ್ನು ಎಳೆದುಕೊಂಡೇ ಹೋದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಹೊಡಿಬಡಿ ಹಂತಕ್ಕೆ ತಲುಪಿತು. ಶಾಸಕರಾದ ಸತೀಶ್ ರೆಡ್ಡಿ, ಭೈರತಿ ಬಸವರಾಜ್ ಮುಂತಾದವರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಶಾಸಕ ಗೋಪಾಲಯ್ಯ ಅವರು ಜೆಡಿಎಸ್ ಸದಸ್ಯ ಆನಂದ್ ಅವರನ್ನು ತಮ್ಮತ್ತ ಕರೆದೊಯ್ದರು. ಅದರಂತೆ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಸತೀಶ್ ರೆಡ್ಡಿ, ಉಮೇಶ್ ಶೆಟ್ಟಿ, ಭೈರತಿ ಬಸವರಾಜ್ ಮುಂತಾದವರ ನಡುವೆ ಮಾತಿನ ಚಕಮಕಿ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತು.

WhatsApp Image 2018-09-28 at 11.50.20 AM

ಜೆಡಿಎಸ್ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಅವರನ್ನು ಬಿಜೆಪಿ ನಾಯಕರು ಕೂಡಿ ಹಾಕಿದರು. ಬಿಜೆಪಿ ಶಾಸಕ ಆರ್.ಅಶೋಕ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವುದು ಈ ಮಾರಮಾರಿಗೆ ಕಾರಣವಾಯಿತು. ಕೈ-ಕಮಲದ ಫೈಟಿಂಗ್ ಜೋರಾಗಿಯೇ ನಡೆದಿತ್ತು. ಈ ಗಲಾಟೆಯ ನಡುವೆಯೇ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾದ ಶಿವಮೂರ್ತಿ ಕಳಸದ್ ಅವರು ಚುನಾವಣೆಯನ್ನು ಘೋಷಿಸಿ ಎಲ್ಲ ಸದಸ್ಯರು ನಿಗದಿತ ಸ್ಥಾನಗಳಲ್ಲಿ ಆಸೀನರಾಗುವಂತೆ ಮನವಿ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದರು.

Facebook Comments

Sri Raghav

Admin