ಬಿಬಿಎಂಪಿ ಮೇಯರ್ ಆಯ್ಕೆಗೆ ಸಿದ್ಧತೆ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇದೇ 27ರಂದು ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿಯೊಂದಿಗೆ ನಾಲ್ಕು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಆಡಳಿತ ನಡೆಸಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಈಗ ಬಿಜೆಪಿಗೆ ಅವಕಾಶ ಒದಗಿಬಂದಿದ್ದು, ಮೇಯರ್ ಹಾಗೂ ಉಪಮೇಯರ್ ಎರಡೂ ಸ್ಥಾನಗಳ ಮೀಸಲಾತಿ ಸಾಮಾನ್ಯವರ್ಗಕ್ಕೆ ನಿಗದಿಯಾಗಿದೆ.

ಬಿಬಿಎಂಪಿ ಸದಸ್ಯರು ಒಂದೆಡೆ ಮೇಯರ್, ಉಪಮೇಯರ್ ಗದ್ದುಗೆಗಾಗಿ ಲಾಬಿ ನಡೆಸುತ್ತಿದ್ದರೆ ಮತ್ತೊಂದೆಡೆ ಅಧಿಕಾರಿಗಳು ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಚುನಾವಣಾ ಪ್ರಕ್ರಿಯೆ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮೇಯರ್ ಚುನಾವಣೆ ಸೆ.27ರಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, 11.30ಕ್ಕೆ ಸದಸ್ಯರ ಹಾಜರಾತಿ ಪಡೆಯಲಾಗುವುದು. ನಂತರ ಅಭ್ಯರ್ಥಿಗಳಿಂದ ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಕಾಲಾವಕಾಶ, ಅವಶ್ಯವಿದ್ದಲ್ಲಿ ಚುನಾವಣೆ, ಆನಂತರ ಫಲಿತಾಂಶ ಪ್ರಕಟ ಮಾಡಲಾಗುವುದು.

ಅದೇ ರೀತಿ ಉಪಮೇಯರ್ ಚುನಾವಣೆಗೂ ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ಅವಶ್ಯವಿದ್ದಲ್ಲಿ ಚುನಾವಣೆ ನಂತರ ಫಲಿತಾಂಶ ಪ್ರಕಟ ಮಾಡಲಾಗುವುದು. ಈ ಸಂಬಂಧ ಬಿಬಿಎಂಪಿ ಚುನಾಯಿತ ಸದಸ್ಯರು ಚುನಾವಣಾ ಸಭೆ ಪ್ರಾರಂಭವಾಗುವ 2 ಗಂಟೆ ಮುಂಚಿತವಾಗಿ ಅಂದರೆ ಸೆ.27ರ ಬೆಳಗ್ಗೆ 9.30 ಮುಂಚಿತವಾಗಿ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದ ಕೊಠಡಿ ಸಂಖ್ಯೆ 109ರಲ್ಲಿ ಪ್ರಾದೇಶಿಕ ಆಯುಕ್ತರಿಗೆ ನಾಮಪತ್ರ ಸಲ್ಲಿಸತಕ್ಕದ್ದು.

ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು. ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಕೈ ಎತ್ತುವ ಮೂಲಕ ಮತಗಳನ್ನು ದಾಖಲಿಸುವುದು ಮತ್ತು ಅವರ ಸಹಿಗಳನ್ನು ನಡಾವಳಿ ಪುಸ್ತಕದಲ್ಲಿ ದಾಖಲಿಸಲಾಗುವುದು.  ಸಭೆಯಲ್ಲಿ ಹಾಜರಿದ್ದ ಹಾಗೂ ಮತದಾನ ಹಕ್ಕು ಹೊಂದಿರುವ ಯಾವುದೇ ಸದಸ್ಯರು ಅವರು ಇಚ್ಛಿಸಿದ್ದಲ್ಲಿ ತಟಸ್ಥವಾಗಿ ಉಳಿಯಬಹುದು.

ಮತದಾನ ಹಕ್ಕು ಹೊಂದಿರುವವರು: ಮಹಾನಗರ ಪಾಲಿಕೆ ಚುನಾಯಿತ ಸದಸ್ಯರು, ಬೆಂಗಳೂರು ಪ್ರತಿನಿಧಿಸುವ ಲೋಕಸಭಾ ಸದಸ್ಯರು, ರಾಜ್ಯ ವಿಧಾನಸಭಾ ಸದಸ್ಯರು, ನಗರ ಪರಿಮಿತಿಯೊಳಗೆ ಮತದಾರರು ಎಂಬುದಾಗಿ ನೋಂದಾಯಿಸಲ್ಪಟ್ಟ ರಾಜ್ಯಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರು ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.

ಮೇಯರ್ ಗಾದಿ ಮೇಲೆ ಕಣ್ಣಿಟ್ಟಿರುವ ಪದ್ಮನಾಭರೆಡ್ಡಿ, ಉಮೇಶ್ ರೆಡ್ಡಿ, ಗೌತಮ್, ಮುನೀಂದ್ರ ಅವರು ಈಗಾಗಲೇ ಲಾಬಿ ಶುರುವಿಟ್ಟುಕೊಂಡಿದ್ದಾರೆ. ತಮ್ಮ ಹಿರಿತನ, ಪಕ್ಷದ ಸೇವೆ ಆಧಾರದ ಮೇಲೆ ತಮ್ಮ ನಾಯಕರೊಂದಿಗೆ ಪ್ರಬಲ ಪೈಪೋಟಿ ನಡೆಸಿದ್ದಾರೆ.

ಕಳೆದ ಬಾರಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ. ನಿರಾಯಾಸವಾಗಿ ಪಡೆಯಬಹುದಾಗಿದ್ದ ಅಧಿಕಾರವನ್ನು ಕಳೆದುಕೊಂಡಿತ್ತು.ಈಗ ಕೊನೆಯ ವರ್ಷದಲ್ಲಿ ಅಧಿಕಾರದ ಅವಕಾಶ ಸಿಕ್ಕಿದೆ. ಬಿಬಿಎಂಪಿ ಚುಕ್ಕಾಣೆಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments