ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.28- ಅರಕ್ಷಶಃ ರಣರಂಗವಾಗಿ ಮಾರ್ಪಟ್ಟು ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ 52ನೇ ಮೇಯರ್ ಆಗಿ ಗಂಗಾಬಿಕೆ ಮಲ್ಲಿಕಾರ್ಜುನ್, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಅವಿರೋಧವಾಗಿ ಆಯ್ಕೆಯಾದರು.  ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ, ಬಿಜೆಪಿಯ ಆರ್.ಅಶೋಕ್ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಗೆಲುವು ಲಭಿಸಿದೆ. ಬಿಜೆಪಿ ಸಭಾತ್ಯಾಗ ಮಾಡಿದ ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೈತ್ರಿ ಅಭ್ಯರ್ಥಿ ಗಂಗಾಂಬಿಕೆ ಪರವಾಗಿ 131 ಅಭ್ಯರ್ಥಿಗಳು ಸಹಿ ಮಾಡಿದ್ದನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ಘೋಷಿಸಿದರು.

ಇದಕ್ಕೂ ಮುನ್ನ ಬಿಬಿಎಂಪಿಯ ಪೌರಸಭಾಂಗಣದಲ್ಲಿ ಮೇಯರ್ ಗಿರಿಗಾಗಿ ಇಂದು ನಡೆದ ಚುನಾವಣೆ ವೇಳೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜನಪ್ರತಿನಿಧಿಗಳ ನಡುವೆ ಮಾರಾಮಾರಿ ನಡೆಯಿತು. ಅಕ್ಷರಶಃ ರಣರಂಗವಾಗಿ ಮಾರ್ಪಟ್ಟು ಪಾಲಿಕೆ ಇತಿಹಾಸದಲ್ಲಿ ಇಂಥ ಬೆಳವಣಿಗೆ ಇದೇ ಮೊದಲ ಬಾರಿಯಾಗಿದ್ದು, ಏನಾಗಲಿದೆಯೋ ಎಂಬ ಆತಂಕ ಕೊನೆಯ ಕ್ಷಣದವರೆಗೂ ಮೂಡಿತ್ತು.  ಬಿಜೆಪಿ, ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಬೃಹತ್ ಫೈಟೇ ನಡೆಯಿತು. ಪರಸ್ಪರ ಕೈ ಕೈ ಮಿಲಾಯಿಸಿ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ನಿಗದಿಯಂತೆ ಮೇಯರ್, ಉಪಮೇಯರ್ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಘೋಷಿಸಿದ ಸಂದರ್ಭದಲ್ಲಿ ಪೌರ ಸಭಾಂಗಣಕ್ಕೆ ಶಾಸಕ ಆರ್.ಅಶೋಕ್ ಅವರು ಪಕ್ಷೇತರ ಸದಸ್ಯರನ್ನು ತಮ್ಮೊಂದಿಗೆ ಕರೆತರುವ ಸಂದರ್ಭದಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷೇತರ ಸದಸ್ಯರನ್ನು ಪರಸ್ಪರ ಎಳೆದಾಡಿದ ಪ್ರಸಂಗ ನಡೆದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು, ಶಾಸಕರ ನಡುವೆ ಗದ್ದಲ ಗಲಾಟೆ ಉಂಟಾಯಿತು.
ಪಾಲಿಕೆಯ 198 ಸದಸ್ಯರು ಸೇರಿದಂತೆ ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ನಗರ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 259 ಮತದಾರರನ್ನು ಹೊಂದಿದ್ದ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್, ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ನಾಜೀಂ ಖಾನ್ ಗೈರುಹಾಜರಾದರೆ, ಬಿಜೆಪಿಯಿಂದ ನಿರ್ಮಲಾ ಸೀತರಾಮ್, ಅನಂತಕುಮಾರ್ ಗೈರು ಹಾಜರಾಗಿದ್ದರು.

ತಡವಾಗಿ ಆಗಮಿಸಿದ ಲಲಿತಾ ತಿಮ್ಮನಂಜಯ್ಯ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರಲಿಲ್ಲ. ಅವರನ್ನು ಮತದಾನದಲ್ಲಿ ತಟಸ್ಥವಾಗಿರುವಂತೆ ಆಯುಕ್ತರು ಸೂಚಿಸಿದರು.  253 ಸದಸ್ಯ ಬಲದಲ್ಲಿ ಗೆಲ್ಲಲು 127 ಮತ ಪಡೆಯಬೇಕು. ಇದಲ್ಲದೆ ವಿಧಾನಪರಿಷತ್ ಸದಸ್ಯ ಉಗ್ರಪ್ಪ, ಸಿ.ಆರ್.ಮನೋಹರ್, ಜಯರಾಮ್ ರಮೇಶ್ ಸೇರಿದಂತೆ ನಾಲ್ವರಿಗೆ ಮತದಾನದ ಅವಕಾಶ ನೀಡಬಾರದೆಂದು ಪದ್ಮನಾಭ ರೆಡ್ಡಿ ಅವರು ಈ ಹಿಂದೆ ನೀಡಿದ ದೂರಿನ ಸಂಬಂಧದ ರೂಲಿಂಗ್‍ನ್ನು ನೀಡಿದ ಚುನವಣಾಧಿಕಾರಿ ಅವರಿಗೆ ಮತದಾನದ ಹಕ್ಕನ್ನು ನೀಡಿದರು.  ಇದನ್ನು ನೀಡುತ್ತಿದ್ದಂತೆ ಬಿಜೆಪಿಯವರು ಸಭಾತ್ಯಾಗ ಮಾಡಿ ಹೊರನಡೆದರು. ಮತದಾನ ಮಾಡುವ ಅವಕಾಶ ನೀಡದೆ ಇದ್ದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅವಕಾಶವಿತ್ತು.

ಬಿಜೆಪಿ ಸಭಾತ್ಯಾಗದ ನಂತರ ಚುನಾವಣೆ ಪ್ರಕ್ರಿಯೆ ಮುಂದುವರೆಸಿ ಹಾಜರಿದ್ದ ಅಭ್ಯರ್ಥಿಗಳ ಸಹಿ ಪಡೆದು ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.  ಇದಕ್ಕೂ ಮುನ್ನ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ , ದೇವದಾಸ್, ಪಕ್ಷೇತರ ಸದಸ್ಯರಾದ ರಮೇಶ್, ಕಾಂಗ್ರೆಸ್‍ನ ಆನಂದ್, ಅಶೋಕ್ ಅವರ ಜೊತೆ ಆಗಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಲವರು ಅವರತ್ತ ಧಾವಿಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಮೂರು ಪಕ್ಷಗಳ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಜೆಡಿಎಸ್ ಬಂಡಾಯ ಸದಸ್ಯ ದೇವದಾಸ್ ಅವರನ್ನು ಕೊನೆಗೂ ಮನವೊಲಿಸಲಾಯಿತು. ಆನಂದ್ ಅವರನ್ನು ಕರೆತಂದು ಕಾಂಗ್ರೆಸ್ ಸೀಟಿನ ಸಾಲಿನಲ್ಲಿ ಕೂರಿಸಿ ಮೈತ್ರಿಗೆ ಬೆಂಬಲ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಯಿತು.  ಮೊದಲು ಮುನಿಸಿಕೊಂಡಿದ್ದ ಮಂಜುಳಾ ನಾರಾಯಣಸ್ವಾಮಿ ಕೊನೆಗೆ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದರು. ಏಳು ಪಕ್ಷೇತರ ಸದಸ್ಯರ ಪೈಕಿ ನಿಷ್ಠೆ ಬದಲಿಸಿದ ಹಿನ್ನೆಲೆಯಲ್ಲಿ ಐವರು ಸದಸ್ಯರನ್ನು ಕಾಂಗ್ರೆಸ್ ಮುಖಂಡರು ನಿನ್ನೆ ರೆಸಾರ್ಟ್‍ಗೆ ಕರೆದೊಯ್ದು ಅಲ್ಲಿಂದ ನೇರ ಬಿಬಿಎಂಪಿಗೆ ಕರೆತಂದು ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಆದರೆ ಮೂವರು ಸದಸ್ಯರು ಗೈರು ಹಾಜರಾಗಿದ್ದು, ಹಲವು ಜೆಡಿಎಸ್‍ನ ಸದಸ್ಯರು ಕೊನೆ ಕ್ಷಣದಲ್ಲಿ ಬಿಜೆಪಿ ಕಡೆ ವಾಲಿದ್ದು ಆತಂಕ ಮೂಡಿಸಿತ್ತು. ಕೊನೆ ಕ್ಷಣದವರೆಗೆ ನಡೆದ ಕುತೂಹಲಕಾರಿ ಬೆಳವಣಿಗೆಯಲ್ಲಿ ದೋಸ್ತಿಗೆ ಜಯ ಲಭಿಸಿತು.  ರಾಜ್ಯಸಭಾ ಸದಸ್ಯರಾದ ಜಯರಾಮ್ ರಮೇಶ್, ಬಿ.ಕೆ.ಹರಿಪ್ರಸಾದ್, ಸಚಿವರಾದ ಕೆಜೆ.ಜಾರ್ಜ್, ಜಮೀರ್ ಅಹಮ್ಮದ್ , ಕೃಷ್ಣ ಭೈರೇಗೌಡ,ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂ.ಕೃಷ್ಣಪ್ಪ , ರಾಮಲಿಂಗಾರೆಡ್ಡಿ, ಟಿ.ಎ.ಶರವಣ, ಕೆ.ಗೋವಿಂದರಾಜ್, ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಜಿ.ಸಿ.ಚಂದ್ರಶೇಖರ್, ಪಿ.ಆರ್.ರಮೇಶ್, ಎಚ್.ಎಂ.ರೇವಣ್ಣ, ಉಗ್ರಪ್ಪ , ಸಿ.ಆರ್.ಮನೋಹರ್, ದಿನೇಶ್ ಗುಂಡೂರಾವ್, ಗೋಪಾಲಯ್ಯ, ಅಶ್ವಥ್ ನಾರಾಯಣ್, ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಸೇರಿದಂತೆ ಬಿಬಿಎಂಪಿ ಸದಸ್ಯರು, ನಗರ ಶಾಸಕರು, ನಗರ ವ್ಯಾಪ್ತಿ ರಾಜ್ಯಸಭಾ ಸದಸ್ಯರು, ಸಂಸದರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

Election

ಬೆಂಗಳೂರು, ಸೆ.28- ಕಳೆದ ಎರಡು ವಾರಗಳಿಂದ ಬಿಬಿಎಂಪಿ ಮೇಯರ್ ಗಾದಿಗಾಗಿ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಂತಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ಸಂಖ್ಯೆ 153ರ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು 52ನೆ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ. ಮೇಯರ್ ಸಂಪತ್‍ರಾಜ್ ಅವರ ಅಧಿಕಾರಾವಧಿ ನಿನ್ನೆ ಕೊನೆಗೊಂಡಿದ್ದು , ಇಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರ ಮೈತ್ರಿಯ ಒಮ್ಮತದ ಅಭ್ಯರ್ಥಿಯಾಗಿ ಗಂಗಾಂಬಿಕೆ ಹೊರಹೊಮ್ಮಿದ್ದಾರೆ. ಈ ಮೂಲಕ ನಾಲ್ಕು ದಶಕಗಳ ನಂತರ ಲಿಂಗಾಯತರೊಬ್ಬರು ಬೆಂಗಳೂರು ಮಹಾನಗರದ ಪ್ರಥಮ ಪ್ರಜೆಯಾಗುವ ಅದೃಷ್ಟ ಖುಲಾಯಿಸಿದೆ. 40 ವರ್ಷಗಳ ಹಿಂದೆ ಪುಟ್ಟೇಗೌಡ ಅವರು ಮೇಯರ್ ಆಗಿದ್ದನ್ನು ಹೊರತುಪಡಿಸಿದರೆ ಲಿಂಗಾಯತರಲ್ಲಿ ಯಾರೂ ಮೇಯರ್ ಆಗಿರಲಿಲ್ಲ.

ಇಂದು ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಆವರಣದಲ್ಲಿ ಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಜೆಡಿಎಸ್ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಿದೆ. ಕಳೆದ ಮೂರು ವರ್ಷಗಳಿಂದ ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ ಬೆಂಬಲಿಸಿದ್ದರು. ಈ ಬಾರಿ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷೇತರರ ಮನವೊಲಿಸಿ ಕೊನೆ ಕ್ಷಣದವರೆಗೆ ಅವರನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅವರೊಂದಿಗೆ ಅವರು ಚುನಾವಣಾ ವೇಳೆ ಆಗಮಿಸಿ ಮೇಯರ್ ಅಭ್ಯರ್ಥಿ ಗಂಗಾಂಬಿಕೆ ಪರ ಮತ ಚಲಾಯಿಸಲಿದ್ದಾರೆ.

#   ‘ಬೃಹತ್’ ಫೈಟ್ : ರಣರಂಗವಾಯ್ತು ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ

WhatsApp Image 2018-09-28 at 11.50.27 AM

ಬೆಂಗಳೂರು,ಸೆ.28- ಇಂದು ನಡೆದ ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಬಿಬಿಎಂಪಿ ಪೌರಸಭಾಂಗಣದಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಬೃಹತ್ ಫೈಟೇ ನಡೆಯಿತು. ಪರಸ್ಪರ ಕೈ ಕೈ ಮಿಲಾಯಿಸಿ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ಮೇಯರ್, ಉಪಮೇಯರ್ ಚುನಾವಣೆಗೆ ಪಕ್ಷೇತರರನ್ನು ಕರೆ ತರುವ ಸಂದರ್ಭದಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷೇತರ ಸದಸ್ಯರನ್ನು ಪರಸ್ಪರ ಎಳೆದಾಡಿದ ಪ್ರಸಂಗ ನಡೆದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು, ಶಾಸಕರ ನಡುವೆ ಗದ್ದಲ ಗಲಾಟೆ ಉಂಟಾಯಿತು. ಅಧಿಕಾರಿಗಳು ಮೂಕಪ್ರೇಕ್ಷಕರಾದರು. ನಿಗದಿಯಂತೆ ಬಿಬಿಎಂಪಿ ಮೇಯರ್ ಚುನಾವಣೆ ಘೋಷಣೆಯಾಯಿತು. ಬಿಬಿಎಂಪಿ ಸದಸ್ಯರು ಒಬ್ಬೊಬ್ಬರೇ ಬಂದು ತಮ್ಮ ಸ್ಥಾನಗಳಲ್ಲಿ ಆಸೀನರಾಗುತ್ತಿದ್ದರು. ಅದರಂತೆ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಬಂದು ಕುಳಿತುಕೊಳ್ಳುತ್ತಿದ್ದರು.

WhatsApp Image 2018-09-28 at 11.50.17 AM

ಈ ಸಂದರ್ಭದಲ್ಲಿ ಶಾಸಕ ಆರ್.ಅಶೋಕ್ ಜೊತೆ ಜೆಡಿಎಸ್‍ನ ದೇವದಾಸ್, ಮಂಜುಳಾ ನಾರಾಯಣಸ್ವಾಮಿ, ಆನಂದ್, ರಮೇಶ್‍ರೆಡ್ಡಿ ಅವರ ಜೊತೆ ಆಗಮಿಸಿದಾಗ ಜೆಡಿಎಸ್ ಹಾಗೂ ಪಕ್ಷೇತರರನ್ನು ಹೈಜಾಕ್ ಮಾಡಿ ಕರೆತರುತ್ತಿದ್ದಾರೆ ಎಂದು ರೊಚ್ಚುಗೆದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲ ಸದಸ್ಯರು ಮತ್ತು ಶಾಸಕರು ಅವರತ್ತ ತೆರಳಿ ಎಳೆದಾಡಲು ಪ್ರಾರಂಭಿಸಿದರು.

ಒಂದು ಹಂತದಲ್ಲಿ ದೇವದಾಸ್ ಅವರನ್ನು ಎಳೆದುಕೊಂಡೇ ಹೋದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಹೊಡಿಬಡಿ ಹಂತಕ್ಕೆ ತಲುಪಿತು. ಶಾಸಕರಾದ ಸತೀಶ್ ರೆಡ್ಡಿ, ಭೈರತಿ ಬಸವರಾಜ್ ಮುಂತಾದವರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಶಾಸಕ ಗೋಪಾಲಯ್ಯ ಅವರು ಜೆಡಿಎಸ್ ಸದಸ್ಯ ಆನಂದ್ ಅವರನ್ನು ತಮ್ಮತ್ತ ಕರೆದೊಯ್ದರು. ಅದರಂತೆ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಸತೀಶ್ ರೆಡ್ಡಿ, ಉಮೇಶ್ ಶೆಟ್ಟಿ, ಭೈರತಿ ಬಸವರಾಜ್ ಮುಂತಾದವರ ನಡುವೆ ಮಾತಿನ ಚಕಮಕಿ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತು.

ಜೆಡಿಎಸ್ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಅವರನ್ನು ಬಿಜೆಪಿ ನಾಯಕರು ಕೂಡಿ ಹಾಕಿದರು. ಬಿಜೆಪಿ ಶಾಸಕ ಆರ್.ಅಶೋಕ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವುದು ಈ ಮಾರಮಾರಿಗೆ ಕಾರಣವಾಯಿತು. ಕೈ-ಕಮಲದ ಫೈಟಿಂಗ್ ಜೋರಾಗಿಯೇ ನಡೆದಿತ್ತು. ಈ ಗಲಾಟೆಯ ನಡುವೆಯೇ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾದ ಶಿವಮೂರ್ತಿ ಕಳಸದ್ ಅವರು ಚುನಾವಣೆಯನ್ನು ಘೋಷಿಸಿ ಎಲ್ಲ ಸದಸ್ಯರು ನಿಗದಿತ ಸ್ಥಾನಗಳಲ್ಲಿ ಆಸೀನರಾಗುವಂತೆ ಮನವಿ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದರು.

# ನಾಮಪತ್ರ ಸಲ್ಲಿಸಿದ ಮೂರು ಪಕ್ಷಗಳು :

BBMP 02
ಬಿಬಿಎಂಪಿಯ 52ನೇ ಮೇಯರ್, ಉಪಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. ಇದೇ ವೇಳೆ ಪಾಲಿಕೆ ಸದಸ್ಯರು, ರಾಜ್ಯಸಭೆ, ಲೋಕಸಭೆ, ವಿಧಾನಪರಿಷತ್ ಮತ್ತು ವಿಧಾನಸಭೆಯ ಸದಸ್ಯರು ಸೇರಿ ಒಟ್ಟು 259 ಜನರಿಗೆ ಮತ ಚಲಾಯಿಸುವ ಹಕ್ಕಿದೆ. ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, 11.30ರ ನಂತರ ಮತದಾನ ಪ್ರಕ್ರಿಯೆ ನಡೆಯಲಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಗಂಗಾಬಿಕೆ. ಬಿಜೆಪಿಯಿಂದ ಶೋಭಾ ಅಂಜನಪ್ಪ, ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನಿಂದ ರಮೀಳಾ ಉಮಾಶಂಕರ್‍, ಬಿಜೆಪಿಯಿಂದ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದರು.

WhatsApp Image 2018-09-28 at 8.43.40 AM

# ಇಬ್ಬರು ಕೇಂದ್ರ ಸಚಿವರು ಗೈರು :
ಮೇಯರ್, ಉಪಮೇಯರ್ ಸ್ಥಾನವನ್ನು ತಮ್ಮದಾಗಿಸಿಕೊಳ್ಳಬೇಕು ಅಂತ ಕನಸು ಕಾಣುತ್ತಿರುವ ಬಿಜೆಪಿಗೆ ಮೊದಲ ಶಾಕಿಂಗ್ ನ್ಯೂಸ್ ಕೇಂದ್ರ ಸಚಿವರಾದ ಅನಂತ್ ಕುಮಾರ್‍ ಹಾಗೂ ನಿರ್ಮಾಲ ಸೀತಾರಾಮ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಲ್ಲ ಎನ್ನಲಾಗಿದ್ದು. ನಿರ್ಮಲ ಸೀತಾರಾಮ್ ಅವರು ಪ್ರಧಾನಿ ಮೋದಿಯವರ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿರುವುದರಿಂದ ಚುನಾವಣೆಗೆ ಗೈರಾಗುತ್ತಿದ್ದಾರೆ ಎನ್ನಲಾಗಿದೆ. ಇನ್ನು ಅನಂತ್ ಕುಮಾರ್ ಅವರು ವಿದೇಶದಲ್ಲಿ ಆನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇಬ್ಬರು ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ.

ಇನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲಿಕೆಯ 198 ಸದಸ್ಯರು, 9 ರಾಜ್ಯಸಭಾ ಸದಸ್ಯರು, 5 ಲೋಕಸಭಾ ಸದಸ್ಯರು, 19 ವಿಧಾನ ಪರಿಷತ್ ಸದಸ್ಯರು ಹಾಗೂ 28 ವಿಧಾನಸಭಾ ಸದಸ್ಯರಿಗೆ ಮತದಾನ ಮಾಡಲು ಅವಕಾಶವಿದೆ.

WhatsApp Image 2018-09-28 at 8.43.28 AM

# ಜಾತಿ ಆಧಾರದ ಮೇಲೆ ಗಂಗಾಂಬಿಕೆ ಅವರನ್ನು ಆಯ್ಕೆ ಮಾಡಿಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು, ಸೆ.28- ಜಾತಿ ಆಧಾರದ ಮೇಲೆ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿಲ್ಲ. ಬೆಂಗಳೂರು ಮಹಾನಗರದ ಅಭಿವೃದ್ಧಿ ದೃಷ್ಟಿಕೋನದಿಂದ ಆಯ್ಕೆ ಮಾಡಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದರು. ಬಿಬಿಎಂಪಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ರಾಮಲಿಂಗಾರೆಡ್ಡಿ ಬಣ, ಪರಮೇಶ್ವರ್ ಹಾಗೂ ದಿನೇಶ್‍ಗುಂಡೂರಾವ್ ಸೇರಿದಂತೆ ಯಾವುದೇ ಬಣಗಳಿಲ್ಲ. ಎಲ್ಲರೂ ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ.

ಯಾರು ಅಭ್ಯರ್ಥಿಯಾಗಬೇಕೆಂದು ಎಲ್ಲ ಸೇರಿ ಚರ್ಚೆ ನಡೆಸಿದಾಗ ಗಂಗಾಂಬಿಕೆಯವರು ಮೇಯರ್ ಆಗಲಿ ಎಂಬ ತೀರ್ಮಾನ ಹೊರಬಿತ್ತು. ಇದರಲ್ಲಿ ಲಿಂಗಾಯಿತರು, ಒಕ್ಕಲಿಗರು ಎಂಬ ಯಾವುದೇ ಭೇದ-ಭಾವ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. ನಮ್ಮಲ್ಲಿ ಭಿನ್ನಮತ ಇದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಸೌಮ್ಯಶಿವಕುಮಾರ್ ಅವರು ಮೇಯರ್ ಆಗಿದ್ದರೂ ನಾವು ಬೆಂಬಲ ನೀಡುತ್ತಿದ್ದೆವು. ಒಮ್ಮತದ ಅಭ್ಯರ್ಥಿಗೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಯಾವುದೇ ಭಿನ್ನಮತ, ಒಡಕು ಇಲ್ಲ ಎಂದು ಹೇಳಿದರು.

ಜೆಡಿಎಸ್‍ನಲ್ಲಿ ಭಿನ್ನಮತವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಆ ಪಕ್ಷದ ಮುಖಂಡರು ಬಗೆಹರಿಸುತ್ತಾರೆ. ಮೇಯರ್ ಗಂಗಾಂಬಿಕೆಯವರು ಒಂದು ವರ್ಷದ ಅವಧಿಗೆ ಸಂಪೂರ್ಣ ನೀಡುವುದು, ಬೆಂಗಳೂರಿನ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin