ನೂರಾರು ಕೋಟಿಯ ಕರ್ಮಕಾಂಡವನ್ನು ಬಯಲು ಮಾಡಿದ ಬಿಬಿಎಂಪಿ ಮೇಯರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಬಿಬಿಎಂಪಿಯಲ್ಲಿ ರಸ್ತೆ, ಮೂಲಭೂತ ಸೌಕರ್ಯ ವಿಭಾಗ ಹಾಗೂ ಬೃಹತ್ ನೀರ್ಗಾಲುವೆ ವಿಭಾಗದಲ್ಲಿ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿರುವ ಪ್ರಕರಣವನ್ನು ಸ್ವತಃ ಮೇಯರ್ ಗೌತಮ್‍ಕುಮಾರ್ ಜೈನ್ ಅವರೇ ಬಹಿರಂಗಗೊಳಿಸಿದ್ದಾರೆ.

ಗುತ್ತಿಗೆದಾರರು ಹಾಗೂ ಅಕಾರಿಗಳು ಶಾಮೀಲಾಗಿ ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆಸಿರುವ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿಂದು ಬಿಡುಗಡೆಗೊಳಿಸಿರುವ ಅವರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಎಸಿಆರ್ ಅಭಿಜಿತ್, ರಾಮಲಿಂಗಂ, ಯೋಗೇಶ್, ಕೆ.ಜೆ.ವಿಶ್ವನಾಥ್ ಮತ್ತಿತರ ಗುತ್ತಿಗೆದಾರರ ಹೆಸರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಕೆಲವು ಅಕಾರಿಗಳು, ಗುತ್ತಿಗೆದಾರರ ಜತೆ ಕೈ ಜೋಡಿಸಿ ಕೆಲವು ಬೋಗಸ್ ಬಿಲ್‍ಗಳನ್ನು ಸೃಷ್ಟಿಸಿದ್ದಾರೆ.

ಕಾಮಗಾರಿಗಳು ನಡೆಯದೆ ಇದ್ದರೂ ಸಹ ಕಾಮಗಾರಿಗಳ ಹೆಸರಲ್ಲಿ ಹಣ ಲಪಟಾಯಿಸಿದ್ದಾರೆ ಎಂದು ಹೇಳಿದ ಅವರು, ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರೇ ದೊಡ್ಡ ಕಿಂಗ್‍ಪಿನ್ ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಿರಿಯ ಅಕಾರಿಗಳು ಕೂಡ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಕಾಮಗಾರಿಯ ಗುತ್ತಿಗೆ ನೀಡುವಾಗ ತಾಂತ್ರಿಕ ಮೌಲ್ಯಮಾಪನವನ್ನು ಅಕಾರಿಗಳು ಸರಿಯಾಗಿ ನೀಡಿಲ್ಲ. ಈ ಅಕ್ರಮಕ್ಕೆ ಸಹಕರಿಸಿದ ಕಾರ್ಯಪಾಲಕ ಎಂಜಿನಿಯರ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಕೆಲವು ಅಕ್ರಮಗಳ ಬಗ್ಗೆ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕಾಲುವೆ ವಿಭಾಗದ ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಆ ವಿಭಾಗದ ಮುಖ್ಯ ಎಂಜಿನಿಯರ್ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು.

ಅವರಿಂದಲೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಎರಡೂ ವಿಭಾಗಗಳ ಮುಖ್ಯ ಎಂಜಿನಿಯರ್‍ಗಳು ಗುತ್ತಿಗೆದಾರರ ಜತೆ ಶಾಮೀಲಾಗಿರುವುದು ಕಂಡುಬಂದಿದೆ.

ಟೆಂಡರ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಕಾಮಗಾರಿ ಗುತ್ತಿಗೆ ಪಡೆಯುವ ಬಗ್ಗೆ ಈ ಹಿಂದೆ ನಡೆದ ಕೌನ್ಸಿಲ್ ಸಭೆಯಲ್ಲೂ ಕೂಡ ಚರ್ಚೆಯಾಗಿತ್ತು. ಹಲವು ಪಾಲಿಕೆ ಸದಸ್ಯರು ಈ ಬಗ್ಗೆ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು.

ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇವೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದಿರುವ ಗುತ್ತಿಗೆಯನ್ನು ಸಂಪೂರ್ಣ ರದ್ದುಮಾಡಬೇಕು ಎಂದು ಅವರು ಒತ್ತಾಯಿಸಿದರು.

ಆರ್‍ಆರ್ ನಗರ, ಮಹದೇವಪುರ, ಬೇಗೂರು ರಸ್ತೆ ವಿಸ್ತರಣೆ ಕಾಮಗಾರಿ, ಯಲಹಂಕ ವಲಯದ ಮುಖ್ಯರಸ್ತೆ, ಉಪಮುಖ್ಯರಸ್ತೆಗಳ ಪಕ್ಕದ ಪಾದಚಾರಿ ಮಾರ್ಗ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ, ರಾಜಕಾಲುವೆ ಶಾಖೆಯಲ್ಲಿನ ನವ ನಗರೋತ್ಥಾನ ಯೋಜನೆ ಕಾಮಗಾರಿ, ವಿವಿಧ ಕಾಮಗಾರಿಗಳಲ್ಲಿ ಎ.ಅಭಿಜಿತ್, ಕೆ.ಜೆ.ವಿಶ್ವನಾಥ್, ಎ.ಚನ್ನಾರೆಡ್ಡಿ, ಯೋಗೀಶ್ ಮುಂತಾದ ಗುತ್ತಿಗೆದಾರರು ತಪ್ಪು ಮಾಹಿತಿ ನೀಡಿ ಅಗ್ರಮವಾಗಿ ಗುತ್ತಿಗೆ ಪಡೆದಿದ್ದಾರೆಂದು ಎಳೆ ಎಳೆಯಾಗಿ ಪತ್ರಿಕಾಗೋಷ್ಠಿಯಲ್ಲಿಂದು ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin