ಕಸ ಗುಡಿಸುವ ಯಂತ್ರ ಖರೀದಿ ವಿಚಾರಕ್ಕೆ ಬಿಬಿಎಂಪಿ ಸಭೆಯಲ್ಲಿ ಸದಸ್ಯರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಕೊರೊನಾ ಸಂಕಷ್ಟದ ಸಮಯದಲ್ಲೂ ಅಕಾರಿಗಳು 275 ಕೋಟಿ ರೂ. ಮೊತ್ತದ ಸ್ವೀಪಿಂಗ್ ಮಿಷನ್ ಖರೀದಿಗೆ 10 ದಿನಗಳ ಶಾರ್ಟ್ ಫಾರಂ ಟೆಂಡರ್ ಕರೆಯಲು ಮುಂದಾಗಿರುವ ಕ್ರಮಕ್ಕೆ ಪಾಲಿಕೆ ಸಭೆಯಲ್ಲಿ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣ ಟೆಂಡರ್ ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಪಾಲಿಕೆಯ ಹಿರಿಯ ಸದಸ್ಯರು, ಪ್ರತಿಪಕ್ಷದ ಸದಸ್ಯರು, ಆಡಳಿತ ಪಕ್ಷದ ಸದಸ್ಯರು ಶಾರ್ಟ್ ಫಾರಂ ಟೆಂಡರ್ ಕುರಿತು ಗಮನ ಸೆಳೆದರು.

ಕೌನ್ಸಿಲ್ ಸಭೆಯಲ್ಲಿ ಆಯುಕ್ತರಿಂದ ಉತ್ತರ ಕೊಡಿಸುವಂತೆ ಸದಸ್ಯರು ಒತ್ತಾಯಿಸಿದರು. ಈ ಹಿಂದೆ ಟಿಪಿಎಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಈಗಲೂ ಅದೇ ಸಂಸ್ಥೆಗೆ ನೀಡಲಾಗಿದೆ ಎಂದು ಸದಸ್ಯ ಉಮೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ವಿಷಯ ಪ್ರಸ್ತಾಪಿಸಿ, ನಿಮ್ಮ ವಾರ್ಡ್‍ನಲ್ಲೇ ಆಗಲಿ, ನಮ್ಮ ವಾರ್ಡ್‍ನಲ್ಲೆ ಆಗಲಿ ಸ್ವೀಪಿಂಗ್ ಮಿಷನ್ 20 ಕಿಲೋ ಮೀಟರ್ ಕಸ ಗುಡಿಸಿ ತೋರಿಸಲಿ ಎಂದು ಹೇಳಿದರು. ಇದುವರೆಗೂ 20ಕಿಮೀ ಕಸ ಕೂಡ ಗುಡಿಸಿಲ್ಲ. ಸ್ವೀಪಿಂಗ್ ಮಿಷನ್ ಕಸ ಗುಡಿಸಿರುವ ದಾಖಲೆ ನೀಡಿದರೆ ಒಂದು ಲಕ್ಷ ಬಹುಮಾನ ನೀಡುತ್ತೇನೆ ಎಂದು ಹೇಳಿದರು.

ಘನತ್ಯಾಜ್ಯ ನಿರ್ವಹಣೆ ಮಾಡುವ ಅಕಾರಿಗಳಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡಬಹುದು. ಸ್ವೀಪಿಂಗ್ ಯಂತ್ರ 20 ಕಿಲೋ ಮೀಟರ್ ಕಸ ಗುಡಿಸಿಬಿಡಲಿ, ನೋಡುತ್ತೇವೆ ಎಂದು ಅಕಾರಿಗಳಿಗೆ ಸವಾಲು ಹಾಕಿದರು.

ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ ಯಂತ್ರಗಳೇ ಕೆಲಸ ಮಾಡುತ್ತಿಲ್ಲ. ಈಗ ಹೊಸದಾಗಿ ಮತ್ತೆ ಯಂತ್ರ ಖರೀದಿ ಮಾಡಬೇಕೆ ಎಂದು ಪ್ರಶ್ನಿಸಿದರು. ಇದರ ನಡುವೆಯೇ ಮತ್ತೆ 20ಕ್ಕೂ ಹೆಚ್ಚು ವಾಹನಗಳಿಗೆ ಟೆಂಡರ್ ಕರೆದಿದ್ದೀರ.

ಈಗಾಗಲೇ 60ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಬಿಬಿಎಂಪಿ ಬಳಿ ಇವೆ. ಹೊಸದಾಗಿ ಬೇಕಿತ್ತೆ ಎಂದು ಕಿಡಿಕಾರಿ ಕೂಡಲೆ ಟೆಂಡರ್ ರದ್ದು ಪಡಿಸುವಂತೆ ಸದಸ್ಯರು ಒತ್ತಾಯಿಸಿದರು.

ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಗೌತಮ್ ಕುಮಾರ್ ಮೇಯರ್ ಆಗಿ 8 ತಿಂಗಳು ಕಳೆದಿದೆ. 8 ತಿಂಗಳಲ್ಲಿ ಬಿಜೆಪಿ ಅವ ಅಟ್ಟರ್ ಪ್ಲಾಫ್ ಅವ. ನಿಮ್ಮ ಅವಯಲ್ಲಿ ಸಾಕಷ್ಟು ಗೋಲ್‍ಮಾಲ್ ಆಗಿದೆ. ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ನೀಡಿಕೆ, ಅಭಿವೃದ್ಧಿ ವಿಚಾರದಲ್ಲಿ ಗೋಲ್‍ಮಾಲ್ ಆಗಿದೆ. ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿ ಪ್ರಕ್ರಿಯೆ ಕೈಬಿಡಬೇಕೆಂದು ಆಗ್ರಹಿಸಿದರು.

ಆಡಳಿತ ಪಕ್ಷ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಪಾಲಿಕೆಯ ಆಡಳಿತ ಅವ ಮುಗಿಯುತ್ತಿದೆ ಎಂದು ಕೆಲಸ ಮಾಡದೆ ಇರಬಾರದೆಂದು ಅಕಾರಿಗಳಿಗೆ ಸೂಚನೆ ನೀಡುವಂತೆ ಮೇಯರ್ ಗೌತಮ್‍ಕುಮಾರ್ ಅವರಲ್ಲಿ ಮನವಿ ಮಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಹಲವು ಕೆಲಸಗಳು, ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಅವುಗಳನ್ನು ಆದ್ಯತೆ ಮೇರೆಗೆ ಮುಂದುವರಿಸುವಂತೆ ಕೋರಿದರು.

# ವಿಶೇಷ ಆಯುಕ್ತ ರವೀಂದ್ರ ವಿರುದ್ಧ ಆಕ್ರೋಶ:
ಬಡ ಮಕ್ಕಳಿಗೆ ಲ್ಯಾಪ್‍ಟಾಪ್ ನೀಡುವ ವಿಚಾರ ಪ್ರಸ್ತಾಪಿಸಿದ ಸದಸ್ಯರು, ಕಳೆದ ಎರಡು ಸಭೆಯಿಂದಲೂ ವಿಶೇಷ ಆಯುಕ್ತ ರವೀಂದ್ರ ಅವರು ಸಭೆಗೆ ಆಗಮಿಸಿಲ್ಲ. ಮಕ್ಕಳು ದಿನನಿತ್ಯ ಆನ್‍ಲೈನ್ ಶಿಕ್ಷಣ ಸಿಗದೆ ಪರದಾಡುತ್ತಿದ್ದಾರೆ ಎಂದು ಗಮನ ಸೆಳೆದರು.

ಕೊನೆ ಪಕ್ಷ ಮೊಬೈಲ್ ಆದರೂ ಕೊಡಿಸುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ. ಆದೇಶ ನೀಡಿದರೆ ಸಾಕು ಮಕ್ಕಳಿಗೆ ಲ್ಯಾಪ್‍ಟಾಪ್, ಟ್ಯಾಬ್ ನೀಡಬಹುದು. ಇದಕ್ಕೆ ಆದೇಶ ನೀಡುವಂತೆ ಸೂಚನೆ ನೀಡುವಂತೆ ಸದಸ್ಯರು ಒತ್ತಾಯಿಸಿದರು.

Facebook Comments

Sri Raghav

Admin