ಉಚ್ಛಾಟಿತ ಬಿಬಿಎಂಪಿ ಸದಸ್ಯರಿಗೆ ಬೊಂಬಾಟ್ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಅನರ್ಹ ಶಾಸಕರಿಗಷ್ಟೇ ಅಲ್ಲ ಲಕ್. ಅವರ ಬೆಂಬಲಿತ ಬಿಬಿಎಂಪಿ ಕಾರ್ಪೊರೇಟರ್ ಗಳಿಗೂ ಕಾದಿದೆ ಉಡುಗೊರೆ.ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿರುವ 15 ಮಂದಿ ಗೆದ್ದ ನಂತರ ಅವರಿಗೆ ಮಂತ್ರಿ ಯೋಗ ಲಭ್ಯವಾಗಲಿದೆ. ಇದಕ್ಕೂ ಮುನ್ನವೇ ಅವರ ಬೆಂಬಲಿತ ಬಿಬಿಎಂಪಿ ಸದಸ್ಯರಿಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಸಿಗುವ ಲಕ್ಷಣಗಳು ಕಾಣುತ್ತಿದೆ.

ಡಿ.5ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಆದರೆ ಡಿ.4ರಂದೇ ಬಿಬಿಎಂಪಿ 12 ಸ್ಥಾಯಿ ಸಮಿತಿಗಳಿಗೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಚುನಾವಣೆಯನ್ನು ನಿಗದಿ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನಿಂದ ಗೆದ್ದಿದ್ದ ಹಲವಾರು ಬಿಬಿಎಂಪಿ ಸದಸ್ಯರು ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಬೆಂಬಲಿಸಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ.

ಮಹಾಲಕ್ಷ್ಮಿ ಲೇ ಔಟ್‍ನಿಂದ ಸ್ಪರ್ಧಿಸಿರುವ ಕೆ.ಗೋಪಾಲಯ್ಯ ಅವರೊಂದಿಗೆ ಗುರುತಿಸಿಕೊಂಡಿರುವ ಹೇಮಲತಾ , ಮಹದೇವ್ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಿರುವುದರಿಂದ ಇವರಿಬ್ಬರೂ ಈಗ ಸ್ವತಂತ್ರರು. ಅದೇ ರೀತಿ ಕೆ.ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಬೈರತಿ ಬಸವರಾಜ್ ಅವರೊಂದಿಗೆ ಕೆಲಸ ಮಾಡುತ್ತಿರುವ ಶ್ರೀಕಾಂತ್, ನಾಗರಾಜ್, ಸುರೇಶ್ ಮತ್ತು ಜಯಪ್ರಕಾಶ್ ಅವರನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಲಾಗಿದ್ದು , ಅವರು ಈಗ ಸ್ವತಂತ್ರ ಸದಸ್ಯರಾಗಿದ್ದಾರೆ.

ಹಾಗೆಯೇ ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ಪರ ಕೆಲಸ ಮಾಡುತ್ತಿರುವ ಹಿರೇಹಳ್ಳಿ ರಾಜಣ್ಣ , ಆರ್ಯ ಶ್ರೀನಿವಾಸ್, ದೊಡ್ಡ ಬಿದರಕಲ್ಲಿನ ವಾಸು ಅವರೂ ಕೂಡ ಇಂದು ಅಥವಾ ನಾಳೆಯೊಳಗೆ ಉಚ್ಛಾಟನೆಗೊಳ್ಳಲಿದ್ದಾರೆ.ಹಾಗಾಗಿ ಈ ಎಲ್ಲಾ ಸದಸ್ಯರು ಬಿಬಿಎಂಪಿಯಲ್ಲಿ ಸ್ವತಂತ್ರ ಸದಸ್ಯರಾಗುತ್ತಾರೆ.

ಅನರ್ಹ ಶಾಸಕರ ಬೆಂಬಲಕ್ಕೆ ನಿಂತಿರುವ ಈ 9 ಮಂದಿಯಲ್ಲಿ 6 ಮಂದಿಗೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕೊಡುವ ಆಶ್ವಾಸನೆಯನ್ನು ಬಿಜೆಪಿ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೇಯರ್, ಉಪ ಮೇಯರ್ ,ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರು ಕಿಂಗ್ ಮೇಕರ್ ಆಗಿದ್ದರು.ಆದರೆ ಇವರಿಗೆ ಈಗ ಕಿಮ್ಮತ್ತಿಲ್ಲದಂತಾಗಿದೆ.

ಮುಂದೂಡಿಕೆ ಸಾಧ್ಯತೆ: ಡಿ.5ರಂದು 15 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ. 4ರಂದೇ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಯಾಗಿದೆ. ಹಾಗಾಗಿ ಯಾವ ಕಡೆ ಕೆಲಸ ಮಾಡಬೇಕು ಎಂಬ ಗೊಂದಲವಿರುವುದರಿಂದ ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡುವಂತೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಿಗೆ ಬಿಜೆಪಿ ಮನವಿ ಮಾಡಲು ತೀರ್ಮಾನಿಸಿದೆ.

ಒಂದು ವೇಳೆ ಈ ಮನವಿಗೆ ಹರ್ಷಗುಪ್ತ ಮನ್ನಣೆ ನೀಡಿದರೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಲಿದೆ. ಅವರು ಮನ್ನಣೆ ನೀಡದಿದ್ದರೆ ಡಿ.4ರಂದು ಚುನಾವಣೆ ಸಂದರ್ಭದಲ್ಲಿ ಸಂಖ್ಯಾ ಬಲ ಕೊರತೆ ಸೃಷ್ಟಿಸಿ ಚುನಾವಣೆ ಮುಂದೂಡಿಕೆಯಾಗುವಂತೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Facebook Comments