ಬಿಬಿಎಂಪಿ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.23- ಆಯುಕ್ತರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವ ಸಾಧ್ಯತೆ ಇದೆ. ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಕೇಂದ್ರ ಹಾಗೂ ಬೇರೆ ಬೇರೆ ಪಾಲಿಕೆ ಕಚೇರಿಗಳನ್ನು ಸುರಕ್ಷಿತವಾಗಿಡಲು ಎಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ.

ಬಿಬಿಎಂಪಿ ಆಯುಕ್ತರಿಗೆ ಸೋಂಕು ತಗುಲಿದ ಬಳಿಕ ಅವರ ಜತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸಬೇಕಿದೆ. ಒಂದು ವೇಳೆ ಆ ರೀತಿ ಮಾಡಿದ್ದೇ ಆದರೆ ಬಹಳಷ್ಟು ಮಂದಿ ಅಧಿಕಾರಿಗಳು ಕ್ವಾರಂಟೈನ್ ಆಗಬೇಕಿದ್ದು, ಕೆಲಸ ಮಾಡುವವರ ಕೊರತೆ ಎದುರಾಗುತ್ತದೆ. ಇದರಿಂದ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಬಿಬಿಎಂಪಿ ಪ್ರತ್ಯೇಕ ಎಸ್‍ಒಪಿಯನ್ನು ರೂಪಿಸಿಕೊಳ್ಳಲು ಮುಂದಾಗಿದೆ.

ಕಚೇರಿಗಳಿಗೆ ಹೆಚ್ಚಿನ ಜನರು ಬರದಂತೆ ತಡೆದು ಆದಷ್ಟು ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಅನಗತ್ಯವಾಗಿ ಜನರು ಕಚೇರಿಗಳಿಗೆ ಬರುವುದನ್ನು ತಪ್ಪಿಸಲು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಕಚೇರಿಗೆ ಭೇಟಿ ನೀಡಬೇಕು. ಕಚೇರಿಗೆ ಭೇಟಿ ನೀಡುವವರ ಸಂಖ್ಯೆಯ ಮೇಲೂ ಕೂಡ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ. ಆಯ್ದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮಾಧ್ಯಮದವರನ್ನು ಮಾತ್ರ ಬಿಬಿಎಂಪಿಗೆ ಭೇಟಿ ನೀಡಲು ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ.

Facebook Comments