6 ರಿಂದ 9ರವರೆಗೆ ಪೌರ ಕಾರ್ಮಿಕರೊಂದಿಗೆ ಬಿಬಿಎಂಪಿ ಅಧಿಕಾರಿಗಳಿಗೆ ಡಬ್ಬಲ್ ಡ್ಯೂಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19-ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಹೊಸ ಪ್ಲ್ಯಾನ್ ರೂಪಿಸಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಪೌರಕಾರ್ಮಿಕರ ಜೊತೆ ಪಾಲಿಕೆ ಅಧಿಕಾರಿಗಳೂ ಕೂಡ ಬೀದಿಗಿಳಿದು ಕೆಲಸ ಮಾಡಬೇಕಾಗಿದೆ. ಇಂತಹ ಒಂದು ಆದೇಶ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದೆ.

ಕೇವಲ ಪೌರಕಾರ್ಮಿಕರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಅಧಿಕಾರಿಗಳು ಕೂಡ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಸ್ಥಳದಲ್ಲೇ ಇದ್ದು ಪೌರಕಾರ್ಮಿಕರೊಂದಿಗೆ ಕೈ ಜೋಡಿಸಿ ಕಸ ನಿರ್ವಹಣೆಯನ್ನು ಇನ್ನು ಮುಂದೆ ಯಶಸ್ವಿಗೊಳಿಸ ಬೇಕಾಗಿದೆ. ಸಹಾಯಕ ಇಂಜಿನಿಯರ್, ಹಿರಿಯ ಇಂಜಿನಿಯರ್, ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆಯುಕ್ತರು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ಡಬಲ್ ಡ್ಯೂಟಿ ಮಾಡಬೇಕಾಗಿದೆ.

ಬೆಳಿಗ್ಗೆ 6 ರಿಂದ 9ರವರೆಗೆ ಪೌರಕಾರ್ಮಿಕ ರೊಂದಿಗೆ ಬೆರೆತು ಆಯಾ ವಾರ್ಡ್‍ಗಳಲ್ಲಿ ತ್ಯಾಜ್ಯ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗಿದೆ. ಬೆಳಿಗ್ಗೆ 10.30ರಿಂದ ಮಾಮೂಲಿಯಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು. ಕೆಲವೆಡೆ ಕಸದ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವ ಹಿನಲೆಯಲ್ಲಿ ಮೇಯರ್ ಗೌತಮ್‍ಕುಮಾರ್ ಜೈನ್ ಅವರು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಸಮಸ್ಯೆಗೆ ಮುಕ್ತಿ ಹಾಡಬಹುದು ಎಂಬ ನಿಟ್ಟಿನಲ್ಲಿ ಇಂತಹ ಒಂದು ಯೋಜನೆ ರೂಪಿಸಿದ್ದು, ಆಯುಕ್ತರು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದ್ದು, ಅಧಿಕಾರಿಗಳು ಕೂಡ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಈ ಸಂಬಂಧಿತ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.

ಮೇಯರ್ ಗೌತಮ್‍ಕುಮಾರ್ ಜೈನ್ ಅವರು ದೆಹಲಿ ಮತ್ತು ಇಂಧೋರ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಸ ನಿರ್ವಹಣೆ ಸಂಬಂಧ ಸಮಾಲೋಚನೆ ನಡೆಸಿದಾಗ ಅಲ್ಲಿನ ಅಧಿಕಾರಿಗಳು ಬೆಳಗ್ಗೆ 6 ರಿಂದ 9ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಯೋಜನೆಯನ್ನು ಜಾರಿಗೊಳಿಸಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಮುಂದಾಗಿದ್ದಾರೆ.
ಹಾಗಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವರ್ಗದ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.

ಕಂದಾಯ ನೌಕರರನ್ನು ಕೈಬಿಡಲು ಮನವಿ:ಬೃಹತ್‍ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್ ಸಮಸ್ಯೆಯಾದ ಕಸದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಬಿಬಿಎಂಪಿ ನೌಕರರ ಸಂಘ ಬೆಂಬಲ ನೀಡುತ್ತದೆ. ಆದರೆ ಕಂದಾಯ ಅಧಿಕಾರಿ ಗಳನ್ನು ಈ ಯೋಜನೆಯಿಂದ ಕೈಬಿಡ ಬೇಕೆಂದು ನೌಕರರ ಸಂಘದ ಮುಖಂಡ ಅಮೃತ್‍ರಾಜ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ಕಂದಾಯ ನೌಕರರಿಗೆ ಅವರದೇ ಆದ ಕೆಲಸಗಳಿರುತ್ತೆ. ಕರ ವಸೂಲಿ ಸಂಬಂಧಿತ ಲೆಕ್ಕಗಳನ್ನು ಕೊಡಬೇಕಾಗಿರುತ್ತದೆ. ಮುಂಜಾನೆ ಕರ್ತವ್ಯಕ್ಕೆ ಹಾಜರಾಗುವುದು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಕಂದಾಯ ನೌಕರರನ್ನು ಕೈಬಿಡಬೇಕೆಂದು ಅವರು ಆಯುಕ್ತರಿಗೆ ಮನವಿ ಮಾಡಿದ್ದಾರೆ.

Facebook Comments