ಕ್ವಾರಂಟೈನ್‍ನಲ್ಲಿರುವವರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಕೆಲ ಬಿಬಿಎಂಪಿ ಅಧಿಕಾರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಬೆಂಕಿ ಬಿದ್ದ ಮನೆಯಲ್ಲಿ ಗಳ ಇರಿದರು ಎಂಬ ಹಾಗೆ ಕೆಲ ಬಿಬಿಎಂಪಿ ಅಧಿಕಾರಿಗಳು ಹೊರರಾಜ್ಯ ಮತ್ತು ದೇಶಗಳಿಂದ ಬಂದು ಕ್ವಾರಂಟೈನ್‍ನಲ್ಲಿರುವವರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಗಾಂಧಿನಗರದ ಖಾಸಗಿ ಹೊಟೇಲ್‍ನ ಕ್ವಾರಂಟೈನ್‍ನಲ್ಲಿರುವ ದಂಪತಿಯಿಂದ ಕೃಷ್ಣೇಗೌಡ ಎಂಬಾತ 25 ಸಾವಿರ ಲಂಚ ಕೇಳಿದ್ದರು ಎಂಬ ಆರೋಪ ಕೇಳಿಬಂದಿದ್ದು, ಆತನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೃಷ್ಣೇಗೌಡ ಎಂಬಾತ ಸಮಾಜ ಸೇವಕನಾಗಿದ್ದು, ಆತ ಹೊಟೇಲ್‍ಗೆ ಬಂದು ದಂಪತಿಯನ್ನು ಪರಿಚಯಿಸಿಕೊಂಡು ನೀವು 25 ಸಾವಿರ ರೂ. ನೀಡಿದರೆ ಕ್ವಾರಂಟೈನ್‍ನಿಂದ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಬೇಡಿಕೆ ಇಟ್ಟಿದ್ದ. ಆದರೆ, ದಂಪತಿ ಲಂಚ ನೀಡುವ ಬದಲು ಕ್ವಾರಂಟೈನ್‍ನಲ್ಲೇ ಇರಲು ತೀರ್ಮಾನಿಸಿದ್ದರು.

ಕೃಷ್ಣೇಗೌಡ ಎಂಬಾತ ದಂಪತಿಯಿಂದ ಲಂಚ ಅಪೇಕ್ಷಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ನಂದಾ ಅವರು ಉಪ್ಪಾರಪೇಟೆ ಪೆÇಲೀಸರಿಗೆ ದೂರು ನೀಡಿದ್ದಾರೆ.

ಈ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ವ್ಯಕ್ತಿ ಬೇರೆ ಹೊಟೇಲ್‍ನ ಕ್ವಾರಂಟೈನ್‍ನಲ್ಲಿರುವವರನ್ನು ಮನೆಗೆ ಕಳುಹಿಸಲು 27 ಸಾವಿರ ಲಂಚ ಕೇಳಿದ ಪ್ರಕರಣ ಭಾರೀ ಸದ್ದು ಮಾಡಿದೆ.

ಲಂಚ ಕೇಳಿದ ವ್ಯಕ್ತಿ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಆಂಗ್ಲ ಚಾನೆಲ್‍ವೊಂದರಲ್ಲಿ ಬಿತ್ತರಗೊಂಡಿದೆ.

ಹೊಟೆಲ್ ಬಿಲ್ 18 ಸಾವಿರ ಹಾಗೂ ವೈದ್ಯರಿಗೆ 8 ಸಾವಿರ ಸೇರಿ 27 ಸಾವಿರ ಹಣ ನೀಡಿದರೆ ನಿಮ್ಮನ್ನು ಕ್ವಾರಂಟೈನ್ ಅವಧಿಗೂ ಮುನ್ನವೇ ಮನೆಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿರುವ ಸಂಭಾಷಣೆ ಬಹಿರಂಗಗೊಂಡಿದೆ.

27 ಸಾವಿರ ನೀಡಿದರೆ ವೈದ್ಯರು ನಿಮ್ಮನ್ನು ಯಾವುದೇ ತಪಾಸಣೆ ನಡೆಸುವುದಿಲ್ಲ. ಒಂದು ವೇಳೆ ಹಣ ನೀಡದಿದ್ದರೆ ನಿಮಗೆ ಮತ್ತೊಮ್ಮೆ ತಪಾಸಣೆ ನಡೆಸಿ ಮತ್ತೆ 14 ದಿನಗಳ ಕ್ವಾರಂಟೈನ್‍ಗೊಳಪಡಿಸುವ ಸಾಧ್ಯತೆ ಇದೆ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.

ಈ ಎರಡೂ ಪ್ರಕರಣಗಳನ್ನು ಗಮನಿಸಿದರೆ ಕ್ವಾರಂಟೈನ್‍ನಲ್ಲಿರುವವರಿಂದ ಕೆಲವರು ಹಣ ಸುಲಿಗೆ ಮಾಡುತ್ತಿರುವ ಸಾಧ್ಯತೆಗಳಿವೆ. ಬಿಬಿಎಂಪಿ ಹಿರಿಯ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ವಾರಂಟೈನ್‍ನಲ್ಲಿರುವವರ ಸುಲಿಗೆ ಪ್ರಕರಣಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Facebook Comments

Sri Raghav

Admin