ಹಾಡುಹಗಲೇ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ ಭೀಕರ ಕೊಲೆ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.24- ನಗರದಲ್ಲಿ ಮತ್ತೆ ರಕ್ತದ ಕೋಡಿ ಹರಿದಿದೆ. ದುಷ್ಕರ್ಮಿಗಳ ತಂಡವೊಂದು ಮಾಜಿ ಮಹಿಳಾ ಕಾರ್ಪೊರೇಟರ್ ಮೇಲೆ ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಭೀಕರ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಕೊಲೆಯಾಗಿರುವ ಮಹಿಳೆಯನ್ನು ಛಲವಾದಿ ಪಾಳ್ಯದ ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶನ್(40) ಎಂದು ಗುರುತಿಸಲಾಗಿದೆ.

ಕಳೆದ 2018ರಲ್ಲಿ ರೇಖಾ ಅವರ ಪತಿ ಕದಿರೇಶನ್ ಅವರನ್ನು ಹತ್ಯೆ ಮಾಡಿದ್ದ ದುಷ್ಕರ್ಮಿಗಳ ತಂಡವೇ ಈಕೆಯನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಛಲವಾದಿ ಪಾಳ್ಯದ ಪ್ಲವರ್ ಗಾರ್ಡನ್‍ನಲ್ಲಿರುವ ತಮ್ಮ ನಿವಾಸದಿಂದ ರೇಖಾ ಕದಿರೇಶನ್ ಅವರು ಇಂದು ಬೆಳಿಗ್ಗೆ ಕಚೇರಿಗೆ ಆಗಮಿಸಿ ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಿ ಮನೆಗೆ ತೆರಳಲು ಮುಂದಾಗುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚು, ಲಾಂಗ್ ಮತ್ತಿತರ ಮಾರಕಾಸ್ತ್ರಗಳಿಂದ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಕೊಲೆ ಮಾಡಲು ಮೊದಲೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು ಹಲ್ಲೆ ಮಾಡುವ ಮುನ್ನ ಸ್ಥಳದಲ್ಲಿ ಆಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾಗಳನ್ನು ಮೇಲ್ಮುಖಕ್ಕೆ ತಿರುಗಿಸಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ತಕ್ಷಣ ಕೆಂಪೇಗೌಡ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಹಿನ್ನಲೆ: ತಮಿಳುನಾಡಿನ ಮೂಲದ ಕದಿರೇಶನ್ ನಗರಕ್ಕೆ ವಲಸೆ ಬಂದು ಛಲವಾದಿಪಾಳ್ಯದಲ್ಲಿ ನೆಲೆಸಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ. ನಂತರ ಆತ ಗಾಂಜಾ ಮಾಫಿಯಾದಲ್ಲಿ ಗುರುತಿಸಿಕೊಂಡು ನಗರದ ಕುಖ್ಯಾತ ರೌಡಿ ಎನಿಸಿಕೊಂಡಿದ್ದ. ಹಂತ ಹಂತವಾಗಿ ಬೆಳೆದ ಕದಿರೇಶನ್ ಹತ್ತು ವರ್ಷಗಳ ಹಿಂದ ಪತ್ನಿ ರೇಖಾ ಅವರನ್ನು ಛಲವಾದಿ ಪಾಳ್ಯ ವಾರ್ಡ್‍ನಿಂದ ಬಿಬಿಎಂಪಿ ಸದಸ್ಯೆಯನ್ನಾಗಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಪತ್ನಿ ರಾಜಕೀಯ ಪ್ರವೇಶಿಸುತ್ತಿದ್ದಂತೆ ತನ್ನ ಹಳೆ ಚಾಳಿಯನ್ನು ಬಿಟ್ಟು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಸಮಾಜ ಸೇವಕನಾಗಿ ಕದಿರೇಶನ್ ಬದಲಾಗಿದ್ದ. ಹೀಗಾಗಿ ತನ್ನ ಹಳೆ ಪಟಾಲಂ ಅನ್ನು ದೂರವಿಟ್ಟಿದ್ದ ಇದರಿಂದ ರೋಸಿ ಹೋದ ಕೆಲವರು ಕದಿರೇಶನ್ ಹತ್ಯೆಗೆ ಸ್ಕೆಚ್ ಹಾಕಿದ್ದರು.

ಕಳೆದ 2018ರಲ್ಲಿ ಛಲವಾದಿಪಾಳ್ಯದ ಆಂಜನಪ್ಪ ಗಾರ್ಡನ್‍ನಲ್ಲಿರುವ ಮುನೇಶ್ವರ ದೇವಸ್ಥಾನದ ಸಮೀಪ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಕದಿರೇಶನ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಪತಿ ಹತ್ಯೆಯಾದ ನಂತರ ಕುಟುಂಬ ನಿರ್ವಹಣೆಯ ನೊಗ ಹೊತ್ತ ರೇಖಾ ಅವರು ರಾಜಕೀಯದಲ್ಲಿ ಮುಂದುವರೆದುಕೊಂಡೆ ಜನರಿಗೆ ಹತ್ತಿರವಾಗಿದ್ದರು.
ಬಿಬಿಎಂಪಿ ಸದಸ್ಯೆಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದ ರೇಖಾ ಅವರು ರಾಜಕೀಯವಾಗಿ ಮತ್ತಷ್ಟು ಬೆಳೆಯುವ ಹಂತಕ್ಕೆ ಬೆಳೆದಿದ್ದರು.

ರೇಖಾ ಅವರ ಈ ಬೆಳವಣಿಗೆಯನ್ನು ಸಹಿಸದೆ ಹಳೇ ದ್ವೇಷದಿಂದ ಕುಗ್ಗಿಹೋಗಿದ್ದ ಕದಿರೇಶನ್ ಹಂತಕರು ಇದೀಗ ರೇಖಾ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಸಾಧ್ಯತೆಗಳಿವೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುರುಗನ್ ಅವರು, ಹಂತಕರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments