ಬೆಂಗಳೂರಲ್ಲಿ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.24- ಇನ್ನು ಮುಂದೆ ಬೆಸ್ಕಾಂ ಮತ್ತು ಜಲಮಂಡಳಿಯವರು ರಸ್ತೆ ಅಗೆಯಬೇಕಾದರೆ ಕಡ್ಡಾಯವಾಗಿ ಬಿಬಿಎಂಪಿ ಅನುಮತಿ ಪಡೆದುಕೊಳ್ಳಬೇಕು. ಹಾಗೂ ಕತ್ತರಿಸಿದ ಭಾಗವನ್ನು ಸಂಬಂಧಪಟ್ಟ ಇಲಾಖೆಗಳೇ ಪುನಃಶ್ಚೇತನಗೊಳಿಸ ಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಗೆದ ಗುಂಡಿ ಪುನಃಶ್ಚೇತನಗೊಳಿಸಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪ್ರಮಾಣೀಕರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರೊಂದಿಗೆ ಸಭೆ ನಡೆಸಿದ ರಾಕೇಶ್‍ಸಿಂಗ್ ಅವರು ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಅವರು ಸೂಚನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ರಾಕೇಶ್‍ಸಿಂಗ್ ಅವರು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ರಾಜಕಾಲುವೆ, ಚರಂಡಿಗಳು, ರಸ್ತೆ ಬದಿಯ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆದು ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಅಗೆದು ಬಿಟ್ಟಿರುವ ಮಣ್ಣು ನೀರುಗಾಲುವೆಗಳಿಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

198 ವಾರ್ಡ್‍ಗಳಲ್ಲೂ ಆದ್ಯತೆ ಮೇರೆಗೆ ತುರ್ತು ಕಾಮಗಾರಿಗಳನ್ನು ಕೈಗೊಂಡು ತಾವು ಕೈಗೊಂಡ ಕಾಮಗಾರಿಗಳ ಬಗ್ಗೆ ಮುಖ್ಯ ಅಭಿಯಂತರರು ಮೇಲ್ವಿಚಾರಣೆ ನಡೆಸಿ ಕೂಡಲೇ ಮೇಲಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸೂಚಿಸಿದರು.

Facebook Comments