ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡರ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27-ಬಿಬಿಎಂಪಿ ಶಾಲಾ -ಕಾಲೇಜುಗಳ ಗುಣಮಟ್ಟ ಹೆಚ್ಚಿಸುವುದರ ಜತೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪಾಲಿಕೆಯ ಶಾಲಾ -ಕಾಲೇಜುಗಳಿಗೆ ಕೆಂಪೇ ಗೌಡ ಶಾಲಾ ಕಾಲೇಜುಗಳೆಂದು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಹಾಗೂ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಅವರು ಪತ್ರಿಕಾಗೋಷ್ಠಿ ಯಲ್ಲಿಂದು ಈ ವಿಷಯ ಪ್ರಕಟಿಸಿದರು.

ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, ಬಿಬಿಎಂಪಿ ಶಾಲಾ ಕಾಲೇಜೆಂದರೆ ಪೋಷಕರಲ್ಲಿ ಅಸಡ್ಡೆ ಇರುತ್ತದೆ. ಉತ್ತಮ ಗುಣಮಟ್ಟವಿದ್ದರೂ ಖಾಸಗಿ ಶಾಲೆಗಳಿಗೆ ಮೊರೆ ಹೋಗುವವರು ಹೆಚ್ಚು. ಹಾಗಾಗಿ ಇನ್ನು ಮಂದೆ ಕೆಂಪೇಗೌಡ ಶಾಲಾ ಕಾಲೇಜೆಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸಮಿತಿಯ ತೀರ್ಮಾನವನ್ನು ಪಾಲಿಕೆ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತೇವೆ ಎಂದು ಹೇಳಿದರು.

ನಾನು ಈ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ನಂತರ ಪಾಲಿಕೆಯ 159 ಶಾಲಾ -ಕಾಲೇಜು ಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಬೋಧನೆ ವಿಚಾರದಲ್ಲಿ ರಾಜಿಯಾಗಬಾರದು. ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಸೂಚಿಸಿದ್ದೇವೆ. ಒಂದು ವೇಳೆ ಗುಣಮಟ್ಟ ಶಿಕ್ಷಣ ಕೊಡದಿದ್ದರೆ ಅಂತಹ ಶಿಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಂಬರುವ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬರುವಂತೆ ಮಾಡಲು ನಮ್ಮ ಸಮಿತಿ ಪ್ರಯತ್ನಿ ಸುತ್ತಿದೆ. ಈ ಬಾರಿಯ ಎಸ್‍ಎಸ್‍ಎಲ್‍ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಭಾನುವಾರ ಸಹ ವಿಶೇಷ ತರಗತಿ ಹಮ್ಮಿಕೊಳ್ಳಲಾಗುತ್ತಿದೆ. ಸಂಜೆ ವೇಳೆ ವಿದ್ಯಾರ್ಥಿಗಳಿಗೆ ಇಸ್ಕಾನ್‍ನ ಲಘು ಉಪಹಾರ ಕೊಟ್ಟು ಓದಲು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.

ವಿಶೇಷ ತರಗತಿಗಳಿಗೆ ವಿದ್ಯಾರ್ಥಿಗಳು ಗೈರಾಗಬಾರದೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇವೆ. ಕಾಲ ಕಾಲಕ್ಕೆ ನೋಟ್ ಪುಸ್ತಕ, ಪಠ್ಯ ಪುಸ್ತಕ, ಶಾಲಾ ಸಮವಸ್ತ್ರ ವಿತರಿಸಲು ನಾಳೆ ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ ಎಂದು ತಿಳಿಸಿದರು. ಡಿಸೆಂಬರ್‍ನಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸ ಕರೆದೊಯ್ಯಬೇಕು. ಜನವರಿಯಲ್ಲಿ ಶಾಲಾ ವಾರ್ಷಿಕೋತ್ಸವ ಮಾಡಲೇಬೇಕು. ತಪ್ಪಿದರೆ ಅಂತಹ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಪಾಲಿಕೆ ಶಾಲೆ-ಕಾಲೇಜಿನಲ್ಲಿ ಕಡು ಬಡುವರು ಓದುತ್ತಾರೆ. ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸುತ್ತೇವೆ. ಒಟ್ಟಾರೆ ಭವಿಷ್ಯದಲ್ಲಿ ಬಿಬಿಎಂಪಿ ಶಾಲಾ – ಕಾಲೇಜುಗಳನ್ನು ಖಾಸಗಿ ಶಾಲಾ -ಕಾಲೇಜುಗಳಿಗೆ ಸರಿಸಮವಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ಮಂಜುಳಾ ನಾರಾಯಣಸ್ವಾಮಿ ತಿಳಿಸಿದರು.

Facebook Comments