ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.3- ಮುಂದಿನ ವರ್ಷ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಇಂದಿನಿಂದ ಪ್ರಾರಂಭವಾಗಿದೆ. ವಾರ್ಡ್ ಪುನರ್ ವಿಂಗಡಣೆ ಕಾರ್ಯಕ್ಕೆ ಚಾಲನೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್ ಎಲ್ಲಾ ಎಆರ್‍ಒ ಅಧಿಕಾರಿಗಳ ಸಭೆ ಕರೆದು 40 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದು ವಾರ್ಡ್‍ನಂತೆ ಗಡಿ ಗುರುತಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಾರ್ಡ್‍ಗಳ ಪುನರ್ ವಿಂಗಡಣೆಯಾದರೂ ವಾರ್ಡ್‍ಗಳ ಸಂಖ್ಯೆ 198 ಇರುತ್ತದೆ. ಕೆಲವು ವಾರ್ಡ್‍ಗಳು ಮಾತ್ರ ಅದಲು ಬದಲಾಗಲಿದೆ. 9 ವಿಧಾನಸಭಾ ಕ್ಷೇತ್ರಗಳ 13 ವಾರ್ಡ್‍ಗಳು ಯಾವುದೇ ಬದಲಾವಣೆಯಾಗುವುದಿಲ್ಲ. ಉಳಿದ ವಾರ್ಡ್‍ಗಳಲ್ಲಿ ಪುನರ್ ವಿಂಗಡಣೆಯಾಗಲಿದೆ.

ಬದಲಾವಣೆ ಆಗದೇ ಇರುವ ವಾರ್ಡ್‍ಗಳು: ಯಲಹಂಕ ವಿಧಾನಸಭಾ ಕ್ಷೇತ್ರದ ಯಲಹಂಕ ಉಪನಗರ , ವಿಜಯನಗರ ಸಭಾ ಕ್ಷೇತ್ರದ ವಿಜಯನಗರ, ಅತ್ತಿಗುಪ್ಪೆ, ಕೆಂಪಾಪುರ ಅಗ್ರಹಾರ, ಸಿ.ವಿ.ರಾಮನ್‍ನಗರದ ಬೆನ್ನಿಗಾನಹಳ್ಳಿ, ಸರ್ವಜ್ಞನಗರ, ಬಿಟಿಎಂ ಬಡಾವಣೆಯ ಈಜಿಪುರ, ಚಿಕ್ಕಪೇಟೆಯ ಜಯನಗರ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಂತಿನಗರ, ಗೋವಿಂದರಾಜ ನಗರ ಕ್ಷೇತ್ರದ ನಾಯಂಡನಹಳ್ಳಿ, ಪುಲಕೇಶಿ ನಗರದ ಡಿ.ಜೆ.ಹಳ್ಳಿ, ಸರ್ವಜ್ಞನಗರದ ಕಾಡುಗೊಂಡನಹಳ್ಳಿ, ಲಿಂಗರಾಜಪುರ ವಾರ್ಡ್‍ಗಳು ಯಾವುದೇ ಬದಲಾವಣೆ ಆಗುವುದಿಲ್ಲ. ಉಳಿದ ಎಲ್ಲವೂ ಪುನರ್ ವಿಂಗಡಣೆ ಆಗಲಿದೆ.

ಕೆಲವು ವಾರ್ಡ್‍ಗಳು 70 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೆ ಕೆಲವು ವಾರ್ಡ್‍ಗಳು ಕೇವಲ 20 ಸಾವಿರ ಜನಸಂಖ್ಯೆ ಇದೆ. ಈ ಜನಸಂಖ್ಯೆ ಅನುಪಾತವನ್ನು ಸರಿದೂಗಿಸಿ 40,000 ಜನಸಂಖ್ಯೆ ಇರುವಂತೆ ವಾರ್ಡ್ ಪುನರ್ ವಿಂಗಡಣೆಯಾಗಲಿದೆ.

ಎಲ್ಲಾ ಎಆರ್‍ಒಗಳಿಗೆ ಕ್ಷೇತ್ರ ಪುನರ್ ವಿಂಗಡಣೆಯ ನೀಲ ನಕ್ಷೆ ನೀಡಲಾಗಿದೆ. ಅವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ಒಂದು ವಾರದಲ್ಲಿ ವರದಿ ನೀಡಲಿದ್ದಾರೆ. ವರದಿ ಬಂದ ನಂತರ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಶಾಸಕರು, ಬಿಬಿಎಂಪಿ ಸದಸ್ಯರನ್ನೊಳಗೊಂಡ ಸಭೆ ಕರೆದು ಅವರಿಂದ ಸಲಹೆ, ಸೂಚನೆಗಳನ್ನು ಆಯುಕ್ತ ಮಂಜುನಾಥ ಪ್ರಸಾದ್ ಆಲಿಸಲಿದ್ದಾರೆ.

ನಂತರ ಸಲಹೆಗಳನ್ನು ಆದರಿಸಿ ಕರಡು ಪ್ರತಿ ಸಿದ್ಧಪಡಿಸಲಾಗುತ್ತದೆ. ತದ ನಂತರ ಸಾರ್ವಜನಿಕರ ಆಕ್ಷೇಪಣೆಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ನೀಡುವ ಸೂಚನೆಗಳನ್ನು ನೋಡಿ ಅಂತಿಮವಾಗಿ ವಾರ್ಡ್ ವಿಂಗಡಣೆಯ ಕರಡು ಸಿದ್ಧಗೊಳ್ಳುತ್ತದೆ.

ಪುನರ್ ವಿಂಗಡಣೆ ಏಕೆ?: ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಆಧಾರದ ಮೇಲೆ ವಾರ್ಡ್ ಪುನರ್ ವಿಂಗಡಣೆ ಮಾಡಿ ಚುನಾವಣೆ ನಡೆಸಬೇಕು. 2010ರಲ್ಲಿ ಜನ ಗಣತಿ ಕಾರ್ಯ ಪೂರ್ಣಗೊಂಡಿರಲಿಲ್ಲ. ಹಾಗಾಗಿ ಹಳೆ ಜನಗಣತಿ ಆಧಾರದಲ್ಲೇ ಬಿಬಿಎಂಪಿಗೆ ಚುನಾವಣೆ ನಡೆಸಲಾಗಿತ್ತು. 2011ರಲ್ಲಿ ಜನಗಣತಿ ನಡೆಸಲಾಗಿತ್ತು. 2011ರ ಜನಗಣತಿ ಪ್ರಕಾರ ಚುನಾವಣೆ ಮಾಡಬೇಕಾಗಿತ್ತು. ಆದರೆ ತಾಂತ್ರಿಕ ಕಾರಣವೊಡ್ಡಿ ಜನಗಣತಿ ಆಧಾರದಲ್ಲಿ ಚುನಾವಣೆ ಮಾಡಿರಲಿಲ್ಲ.

ಇದೀಗ 2020ಕ್ಕೆ ಮತ್ತೆ ಚುನಾವಣೆ ಎದುರಾಗಲಿದೆ. ವಾರ್ಡ್ ಪುನರ್ ವಿಂಗಡಣೆ ಮಾಡಲೇಬೇಕು. ಇಲ್ಲದಿದ್ದರೆ ಚುನಾವಣೆಗೆ ಅವಕಾಶ ಕೊಡುವುದಿಲ್ಲ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.ಹಾಗಾಗಿ ವಾರ್ಡ್ ಪುನರ್ ವಿಂಗಡಣೆ ಕಾರ್ಯವನ್ನು ಅನಿವಾರ್ಯವಾಗಿ ಮಾಡಲೇಬೇಕಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ