BIG NEWS : ಬಿಬಿಎಂಪಿಯ 198 ವಾರ್ಡ್‍ಗಳನ್ನು 225ಕ್ಕೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.3-ಜನಸಂಖ್ಯೆಗೆ ಅನುಗುಣವಾಗಿ ಬಿಬಿಎಂಪಿಯ ಹಾಲಿ ಇರುವ 198 ವಾರ್ಡ್‍ಗಳನ್ನು 225ಕ್ಕೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

ವಾರ್ಡ್‍ಗಳನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಹಾಲಿ ಇರುವ 198 ವಾರ್ಡ್‍ಗಳನ್ನು 225ಕ್ಕೆ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಾಳೆ ನಡೆಯಲಿರುವ ಜಂಟಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರಿನ ಗಾತ್ರ ಇನ್ನಷ್ಟು ಹೆಚ್ಚಳವಾಗಿದೆ. ಹಾಗಾಗಿ ವಾರ್ಡ್‍ಗಳ ಪುನರ್ ವಿಂಗಡಣೆಯಾಬೇಕಿದೆ. ಕೆಲವು ವಾರ್ಡ್‍ಗಳಲ್ಲಿ 40 ಸಾವಿರ ಮತದಾರರಿದ್ದರೆ, ಕೆಲವು ವಾರ್ಡ್‍ಗಳಲ್ಲಿ ಕಡಿಮೆ ಇದ್ದಾರೆ. ಇದನ್ನು ಸರಿದೂಗಿಸಲು ವಾರ್ಡ್‍ಗಳ ಹೆಚ್ಚಳ ಅನಿವಾರ್ಯ ಎಂದರು.

2012ರ ಜನಸಂಖ್ಯೆಗೆ ಹೋಲಿಸಿದರೆ ಈಗ ಮತದಾರರ ಸಂಖ್ಯೆಯೂ ಹೆಚ್ಚಳವಾಗಿದೆ. ಈಗಿರುವ ಯಥಾಸ್ಥಿತಿಯಲ್ಲೇ ವಾರ್ಡ್‍ಗಳನ್ನು ಮುಂದುವರೆಸಬೇಕೆ ಇಲ್ಲವೇ ಹೆಚ್ಚಳ ಮಾಡಬೇಕೆ ಎಂಬುದನ್ನು ನಾಳೆ ನಡೆಯುವ ಜಂಟಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು. ಇಂದು ನಡೆದ ಸಚಿವ ಸಂಪುಟದಲ್ಲಿ ವಾರ್ಡ್ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಚುನಾವಣೆ ಮುಂದೂಡಿಕೆಗೆ ಮನವಿ: ಒಂದು ವೇಳೆ ಜಂಟಿ ಸಮಿತಿ ಸಭೆಯಲ್ಲಿ ವಾರ್ಡ್‍ಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿ ಮಾಡಬೇಕೆಂದು ತೀರ್ಮಾನವಾದರೆ ಬಿಬಿಎಂಪಿ ಚುನಾವಣೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಲಿದೆ ಎಂದು ತಿಳಿಸಿದರು.

ವಾರ್ಡ್ ಸಂಖ್ಯೆ ಹೆಚ್ಚಳ ಮಾಡಿದರೆ ಹಾಲಿ ಇರುವ ಸ್ಥಿತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ. ಎಲ್ಲವನ್ನು ಪರಿಷ್ಕರಣೆ ಮಾಡಬೇಕಾಗಿರುವುದರಿಂದ ಚುನಾವಣೆ ಮುಂದೂಡುವುದು ಅನಿವಾರ್ಯ. ನ್ಯಾಯಾಲಯಕ್ಕೆ ಇದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಇನ್ನು ಬಿಬಿಎಂಪಿಯಲ್ಲಿ 8 ವಲಯಗಳಿವೆ. ಇದನ್ನು ಕೂಡ 15ಕ್ಕೆ ಹೆಚ್ಚಳ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ವಲಯಗಳು ಹೆಚ್ಚಳವಾದರೆ ಪ್ರತಿಯೊಂದು ವಲಯಕ್ಕೂ ಸಹಾಯಕ ಆಯುಕ್ತರನ್ನು ನೇಮಿಸಬೇಕು. ಈ ಎಲ್ಲ ಪ್ರಕ್ರಿಯೆಗಳಿಗೆ ಸಮಯ ಹೆಚ್ಚು ಬೇಕಿರುವುದರಿಂದ ಚುನಾವಣೆ ನಡೆಸಲು ಹೆಚ್ಚಿನ ಸಮಯ ಅವಕಾಶವನ್ನು ಕೊಡಬೇಕೆಂದು ಕೇಳಿಕೊಳ್ಳುವುದಾಗಿ ತಿಳಿಸಿದರು.

# ನರ್ಸರಿ ಶಾಲೆ:
ರಾಜ್ಯದ 270 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ(ಎಲ್‍ಕೆಜಿ, ಯುಕೆಜಿ) ಶಿಕ್ಷಣವನ್ನು ಆರಂಭಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಾರಂಭಿಕವಾಗಿ 270 ಆಯ್ದ ಶಾಲೆಗಳಲ್ಲಿ ಮಾತ್ರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುವುದು. ಇದಕ್ಕಾಗಿ ತರಬೇತಿ ಪಡೆದ ಶಿಕ್ಷಕರು ಮತ್ತು ಸಹಾಯಕಿಯರನ್ನು ನೇಮಕ ಮಾಡಲಾಗುವುದು. ಶಿಕ್ಷಕರಿಗೆ 7.500 ರೂ. ಹಾಗೂ ಸಹಾಯಕರಿಯರಿಗೆ 5000 ರೂ. ಗೌರವಧನ ನೀಡಲಾಗುವುದು.

ಇನ್ನು ಮುಂದೆ ಪದವಿ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ ಎಂದು ಹೇಳಿದರು.

# ನಷ್ಟ ದುಪ್ಪಟ್ಟು ವಸೂಲಿ:
ಇನ್ನು ಮುಂದೆ ಸಾಂಕ್ರಾಮಿಕ ರೋಗದ ವೇಳೆ ಯಾರಾದರೂ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದರೆ ಅಂಥವರಿಂದಲೇ 2ರಷ್ಟು ನಷ್ಟ ವಸೂಲಿ ಮಾಡಲಾಗುವುದು. ಇದಕ್ಕಾಗಿ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಜೊತೆಗೆ ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯವನ್ನು ನಿಗಿದತ ಸಮಯದಲ್ಲಿ ಗುತ್ತಿಗೆದಾರರು ವಿಲೇವಾರಿ ಮಾಡದಿದ್ದರೆ ಅವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು 10 ಸಾವಿರದಿಂದ 7 ಲಕ್ಷದವರೆಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.

Facebook Comments