ಮಿತಿಮೀರಿದ ಮಾರ್ಷಲ್‍ಗಳ ದಬ್ಬಾಳಿಕೆ, ಪೌರಕಾರ್ಮಿಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.13-ಕಂಡ ಕಂಡಲ್ಲಿ ಕಸ ಎಸೆಯುವುದನ್ನು ತಡೆಯುವ ಉದ್ದೇಶದಿಂದ ಬಿಬಿಎಂಪಿ ಮಾರ್ಷಲ್‍ಗಳನ್ನು ನೇಮಿಸಿದೆ. ಆದರೆ ಇವರ ದಬ್ಬಾಳಿಕೆ ಮಿತಿಮೀರಿದ್ದು ಪೌರಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.  ಇಂದು ಜೆಸಿರಸ್ತೆಯಲ್ಲಿ ಪೌರಕಾರ್ಮಿಕ ರಮೇಶ್ ಎಂಬುವರ ಮೇಲೆ ಮಾರ್ಷಲ್‍ಗಳು ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ಪೌರಕಾರ್ಮಿಕರು ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಕಂಡ ಕಂಡಲ್ಲಿ ಕಸ ಹಾಕುವವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಸಾವಿರಾರು ರೂ. ವೇತನ ನೀಡಿ ಮಾರ್ಷಲ್‍ಗಳನ್ನು ನೇಮಕ ಮಾಡಿದೆ. ಆದರೆ ಈ ಮಾರ್ಷಲ್‍ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದನ್ನು ಬಿಟ್ಟು ಲಂಚಕ್ಕೆ ಒಳಗಾಗುತ್ತಿದ್ದಾರೆ ಎಂದು ಪೌರಕಾರ್ಮಿಕರು ಆರೋಪಿಸಿದರು.

ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರುತ್ತಿದ್ದಾರೆಂದು ಕಮೀಷನ್ ಪಡೆಯುತ್ತಾರೆ. ಜನರಲ್ಲಿ ಅರಿವು ಮೂಡಿಸುವುದನ್ನು ಬಿಟ್ಟು ಹಣದ ಆಸೆಗೆ ಒಳಗಾಗಿದ್ದಾರೆ. ಇಂಥ ಮಾರ್ಷಲ್‍ಗಳ ಅವಶ್ಯಕತೆ ಇದೆಯೇ ಎಂದು ಪೌರಕಾರ್ಮಿಕರು ಪ್ರಶ್ನಿಸಿದರು. ದುರದ್ದೇಶದಿಂದ ರಮೇಶ್ ಎಂಬ ಪೌರಕಾರ್ಮಿಕನ ಮೇಲೆ ಬರೆ ಬರುವಂತೆ ಮಾರ್ಷಲ್‍ಗಳು ಹಲ್ಲೆ ಮಾಡಿದ್ದಾರೆ. ತಕ್ಷಣ ತಪ್ಪಿತಸ್ಥ ಮಾರ್ಷಲ್ ಮೇಲೆ ಕ್ರಮ ಕೈಗೊಳ್ಳಬೇಕು. ಕೂಡಲೇ ಇವರ ಆಟೋಟೊಪಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ನಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸ್ವಚ್ಛತೆಯಲ್ಲಿ ತೊಡಗುತ್ತೇವೆ. ಒಂದು ದಿನ ಕಸ ತೆಗೆಯದಿದ್ದರೆ ಇಡೀ ನಗರ ಗಬ್ಬೆದ್ದು ಹೋಗುತ್ತದೆ. ನಮಗೆ ನ್ಯಾಯ ಬೇಕು. ಮಾರ್ಷಲ್‍ಗಳ ದಬ್ಬಾಳಿಕೆ ನಿಲ್ಲಬೇಕು ಇಲ್ಲದಿದ್ದರೆ ಕಸ ತೆಗೆಯುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಪೌರಕಾರ್ಮಿಕರು ಎಚ್ಚರಿಸಿದರು.

Facebook Comments