ಬಹುಪಯೋಗಿ ಕಾರ್ ಪಾರ್ಕಿಂಗ್ ಕಾಮಗಾರಿ 3 ತಿಂಗಳಲ್ಲಿ ಪೂರ್ಣ : ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ನಗರದ ಫ್ರೀಡಂ ಪಾರ್ಕ್‍ನಲ್ಲಿ ನಿರ್ಮಿಸಲಾಗುತ್ತಿರುವ ಬಹುಪಯೋಗಿ ಕಾರ್‍ಪಾರ್ಕಿಂಗ್ ಹಾಗೂ ಓಕಳಿಪುರಂ ಅಷ್ಟಪಥದ ಕಾಮಗಾರಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪ ಮೇಯರ್ ಭದ್ರೇಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ಈ ಎರಡೂ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪದ್ಮಾವತಿ ಅವರು ಮೇಯರ್ ಆಗಿದ್ದಾಗ 2.55 ಲಕ್ಷ ಚದರ ಅಡಿ ಪ್ರದೇಶದಲ್ಲಿ ಮೂರು ನೆಲಅಂತಸ್ತಿನ ಕಾರ್ ಪಾರ್ಕಿಂಗ್‍ಗೆ ಚಾಲನೆ ನೀಡಲಾಗಿತ್ತು. ಕಾಮಗಾರಿ ವಿಳಂಬವಾಗಲು ಭೂ ಗರ್ಭದಲ್ಲಿ ಭಾರೀ ಬಂಡೆ ಅಡ್ಡ ಬಂದಿದ್ದು ಕಾರಣವಾಗಿತ್ತು. ಬಂಡೆ ತೆರವುಗೊಳಿಸಲು ಭೂಗರ್ಭ ಇಲಾಖೆ ಅನುಮತಿ ನೀಡಿರಲಿಲ್ಲ. ಕೊನೆಗೆ ಅದೇ ಇಲಾಖೆ ಬಂಡೆ ತೆರವುಗೊಳಿಸಿತು.

ಈಗಾಗಲೇ ಶೇ.80ರಷ್ಟು ಕೆಲಸ ಮುಗಿದಿದ್ದು, ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದೇನೆ ಎಂದು ಹೇಳಿದರು. ಎಂಭತ್ತು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಈ ನೆಲಅಂತಸ್ತಿನ ಕಾರ್ ಪಾರ್ಕಿಂಗ್‍ನಲ್ಲಿ ಮೊದಲ ಅಂತಸ್ತಿನಲ್ಲಿ 580 ಕಾರುಗಳು, ಎರಡನೇ ಅಂತಸ್ತಿನಲ್ಲಿ 130 ಹಾಗೂ ಕೆಳ ಅಂತಸ್ತುಗಳಲ್ಲಿ ತಲಾ 225 ಕಾರುಗಳು ಹಾಗೂ 500 ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.

ಒಟ್ಟಾರೆ ಈ ಬಹುಮಹಡಿ ಕಾರ್‍ಪಾರ್ಕಿಂಗನ್ನು ಗ್ರೀನ್ ಬಿಲ್ಡಿಂಗ್‍ಗಾಗಿ ಮಾಡುತ್ತೇವೆ. ಕಾಮಗಾರಿ ಮುಗಿದ ಕೂಡಲೇ ಕಟ್ಟಡದ ಮೇಲ್ಭಾಗದಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಮೀಸಲಿಟ್ಟು ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಇಲ್ಲಿ 28 ಶೌಚಾಲಯಗಳನ್ನು ನಿರ್ಮಿಸ ಲಾಗುತ್ತದೆ. ಇಡೀ ಮೇಲ್ಭಾಗವನ್ನು ಸೋಲಾರ್ ಪ್ಲಾಂಟ್ ಮಾಡಿ ಪ್ರತಿ ನಿತ್ಯ 500 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಉದ್ಯಾನವನ ಹಾಗೂ ಕಟ್ಟಡ ದೀಪಗಳಿಗೆ ಬಳಸಿ ಕೊಂಡು ಉಳಿದಿದ್ದನ್ನು ಪವರ್‍ಗ್ರಿಡ್‍ಗೆ ಮಾರಾಟ ಮಾಡುತ್ತೇವೆ ಎಂದು ಮೇಯರ್ ತಿಳಿಸಿದರು.

ಅಲ್ಲದೆ ಒಂದು ಲಕ್ಷ ಲೀಟರ್ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸಿ ಅಲ್ಲಿ ಸಂಗ್ರಹ ವಾಗುವ ನೀರನ್ನು ಅಗ್ನಿಶಾಮಕ ದಳ, ಉದ್ಯಾನವನಗಳಿಗೆ ಉಪಯೋಗಿಸಿಕೊಳ್ಳಲಾಗುವುದು. ಒಟ್ಟಾರೆ ಈ ಪಾರ್ಕಿಂಗ್ ಕಟ್ಟಡವನ್ನು ಹಸಿರು ಕಟ್ಟಡ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಓಕಳಿಪುರಂನಲ್ಲಿ ಪ್ರಾರಂಭಿಸಲಾಗಿರುವ ಅಷ್ಟಪಥ ರಸ್ತೆ ಕಾಮಗಾರಿ ವೀಕ್ಷಿಸಿದ ಮೇಯರ್, ಇಲ್ಲೂ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು 20 ದಿನಗಳಲ್ಲಿ ಎರಡು ಪಥಗಳನ್ನು ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ. ಉಳಿದ ಎಲ್ಲಾ ಪಥಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

Facebook Comments