ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎತ್ತಂಗಡಿಗೆ ಎರವಲು ಅಧಿಕಾರಿಗಳ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

bbmp011 ಬೆಂಗಳೂರು, ನ.10- ಪಾಲಿಕೆಗೆ ಎರವಲು ಸೇವೆ ಮೇಲೆ ಬಂದು ಲೂಟಿ ಮಾಡುತ್ತಿರುವ ಅಧಿಕಾರಿಗಳ ಗುಂಪೊoದು ಆಯುಕ್ತ ಮಂಜುನಾಥ್ ಪ್ರಸಾದ್ ಎತ್ತಂಗಡಿಗೆ ಲಾಬಿ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅವಧಿ ಪೂರ್ಣಗೊಂಡ ಕೆಲ ಎರವಲು ಸೇವೆ ಅಧಿಕಾರಿಗಳನ್ನು ಇತ್ತೀಚೆಗೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಾತೃ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಆಯುಕ್ತರ ಮಾತಿಗೆ ಕಿಮ್ಮತ್ತು ನೀಡದ ಅಧಿಕಾರಿಗಳು ಪಾಲಿಕೆಯಲ್ಲೇ ಮುಂದುವರಿದಿದ್ದರು. ಮಾತ್ರವಲ್ಲ, ತಮ್ಮ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಎರವಲು ಸೇವೆ ಅಧಿಕಾರಿಗಳ ವಾದಕ್ಕೆ ಮನ್ನಣೆ ನೀಡದೆ ಮಾತೃ ಇಲಾಖೆಗೆ ಹೋಗುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.
ಆಯುಕ್ತರ ಈ ಧೋರಣೆಯಿಂದ ಬೇಸತ್ತ ಎರವಲು ಸೇವೆ ಅಧಿಕಾರಿಗಳು ಇದೀಗ ಮಂಜುನಾಥ್ ಪ್ರಸಾದ್ ಅವರನ್ನೇ ಎತ್ತಂಗಡಿ ಮಾಡಿಸಲು ರಾಜಕೀಯ ಕಾರ್ಯತಂತ್ರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದಲ್ಲಿ ಒತ್ತಡ ತಂದು ಮಂಜುನಾಥ್ ಪ್ರಸಾದ್ ಅವರನ್ನೇ ವರ್ಗಾವಣೆ ಮಾಡಿಸಿ ತಮ್ಮ ಮಾತು ಕೇಳುವ ಅಧಿಕಾರಿಯೊಬ್ಬರನ್ನು ಆಯುಕ್ತರ ಸ್ಥಾನಕ್ಕೆ ನಿಯೋಜಿಸಲು ಲಾಬಿ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಮಂಜುನಾಥ್ ಪ್ರಸಾದ್ ಅವರು ಎತ್ತಂಗಡಿಯಾಗುವ ಸಾಧ್ಯತೆಯಿದ್ದು, ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರು ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಾರಣವೇನು..? ತಮ್ಮ ಗಾಡ್‍ಫಾದರ್‍ಗಳ ಮೂಲಕ ಕೆಎಸ್‍ಎಫ್‍ಸಿ, ಲೋಕೋಪಯೋಗಿ ಮತ್ತಿತರ ಇಲಾಖೆಗಳಿಂದ ಬಿಬಿಎಂಪಿಗೆ ಎರವಲು ಸೇವೆ ಮೇಲೆ ಬರುವ ಅಧಿಕಾರಿಗಳು ಅಂಧಾ ದರ್ಬಾರ್ ನಡೆಸುತ್ತಿದ್ದಾರೆ.

ಇಂತಹ ಅಂಧಾ ದರ್ಬಾರ್ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸಾಧ್ಯವಿಲ್ಲ. ಹೀಗಾಗಿ ಎರವಲು ಸೇವೆ ಮೇಲೆ ಬರುವ ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಯಾವುದೇ ಒಬ್ಬ ಅಧಿಕಾರಿ ಬಿಬಿಎಂಪಿಗೆ ಎರವಲು ಸೇವೆ ಮೇಲೆ ಬಂದರೆ ಮೂರು ವರ್ಷಗಳ ಕಾಲ ಮಾತ್ರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ಮತ್ತೆ ಮಾತೃ ಇಲಾಖೆಗೆ ವಾಪಸಾಗಬೇಕು. ಆದರೆ, ಐದು ವರ್ಷ ಕಳೆದರೂ ಇನ್ನೂ ಕೆಲ ಎರವಲು ಸೇವೆ ಸಿಬ್ಬಂದಿಗಳು ಪಾಲಿಕೆಯಲ್ಲೇ ಕರ್ತವ್ಯನಿರ್ವಹಿಸುತ್ತಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಅವಧಿ ಪೂರ್ಣಗೊಂಡ ಎರವಲು ಸೇವೆ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಮಾತೃ ಇಲಾಖೆಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿತ್ತು.

ಸರ್ಕಾರ ಈ ಆದೇಶದ ಮೇರೆಗೆ ಕೆಲ ದಿನಗಳ ಹಿಂದೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಕೆಲ ಎರವಲು ಸೇವೆ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾಯಿಸಿದ್ದರು. ಆದರೂ ರಾಜಕೀಯ ಒತ್ತಡ ತಂದು ಬಿಬಿಎಂಪಿಯಲ್ಲೇ ಮುಂದುವರಿಯಲು ಎರವಲು ಅಧಿಕಾರಿಗಳು ಕಸರತ್ತು ನಡೆಸಿದ್ದರು. ಆದರೆ, ಇದಾವುದೇ ಲಾಬಿಗೂ ಮಣಿಯದ ಆಯುಕ್ತರು ಆದೇಶ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಅನಿವಾರ್ಯವಾಗಿ ಆಯುಕ್ತರ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಎರವಲು ಸೇವೆ ಅಧಿಕಾರಿಗಳು ಅಲ್ಲೂ ತಮ್ಮ ಆಟ ನಡೆಯದಿದ್ದಾಗ ಕೊನೆಯ ಅಸ್ತ್ರವಾಗಿ ಮಂಜುನಾಥ್ ಪ್ರಸಾದ್ ಅವರನ್ನೇ ವರ್ಗಾವಣೆಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅವರ ಈ ಲಾಬಿಗೆ ಸರ್ಕಾರ ಮಣಿಯುವುದೋ ಅಥವಾ ಮಂಜುನಾಥ್ ಪ್ರಸಾದ್ ಅವರನ್ನೇ ಬಿಬಿಎಂಪಿ ಆಯುಕ್ತರನ್ನಾಗಿ ಮುಂದುವರೆಸುವುದೋ ಕಾದು ನೋಡಬೇಕು.

Facebook Comments