ಕೊನೆ ಮೇಯರ್ ಸ್ಥಾನಕ್ಕೆ ನಾಲ್ವರ ನಡುವೆ ಸಿಕ್ಕಾಪಟ್ಟೆ ಪೈಫೋಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.18- ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತದ ಕೊನೆ ಮೇಯರ್ ಸ್ಥಾನಕ್ಕಾಗಿ ಹಿರಿಯನಾಲ್ವರು ಸದಸ್ಯರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.  ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆಪ್ಟೆಂಬರ್‍ಗೆ ಪೂರ್ಣಗೊಳ್ಳಲಿದ್ದು, ಕೊನೆ ಅವಧಿಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಶಂಕರಮಠ ವಾರ್ಡ್‍ನ ಶಿವರಾಜ್, ದತ್ತಾತ್ರೇಯ ವಾರ್ಡ್‍ನ ಸತ್ಯನಾರಾಯಣ್, ಜಯಮಹಲ್ ವಾರ್ಡ್‍ನ ಗುಣಶೇಖರ್ ಹಾಗೂ ಗುರಪ್ಪನಪಾಳ್ಯ ವಾರ್ಡ್‍ನ ಮೊಹಮ್ಮದ್ ರಿಜ್ವಾನ್ ಅವರ ನಡುವೆ ಪೈಫೋಟಿ ಏರ್ಪಟ್ಟಿದೆ.

ಈ ನಾಲ್ವರು ಹಿರಿಯ ಸದಸ್ಯರು ಈಗಾಗಲೇ ಆಡಳಿತ ಪಕ್ಷದ ನಾಯಕರಾಗಿ ಹಾಗೂ ಹಲವಾರು ಸ್ಥಾಯಿಸಮಿತಿಗಳ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ತಮ್ಮ ಸೇವಾ ಹಿರಿತನದ ಆಧಾರದ ಮೇಲೆ ಮೇಯರ್ ಸ್ಥಾನವನ್ನು ತಮಗೆ ಬಿಟ್ಟುಕೊಡಬೇಕೆಂದು ಕೆಪಿಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.

ಶಂಕರಮಠ ವಾರ್ಡ್‍ನ ಶಿವರಾಜ್ ಅವರು ಬಿಬಿಎಂಪಿಯಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿರುವುದಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಕೃಪಾಕಟಾಕ್ಷಕ್ಕೂ ಪಾತ್ರರಾಗಿದ್ದಾರೆ.  ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಿವರಾಜ್ ಅವರಿಗೆ ಮುಂದಿನ ಮೇಯರ್ ಸ್ಥಾನ ಲಭಿಸಿದರೂ ಆಶ್ಚರ್ಯಪಡುವಂತಿಲ್ಲ.

ದತ್ತಾತ್ರೇಯ ವಾರ್ಡ್‍ನ ಸತ್ಯನಾರಾಯಣ ಅವರು ಹಿರಿಯ ಬಿಬಿಎಂಪಿ ಸದಸ್ಯರಾಗಿದ್ದು, ತಮ್ಮ ಗಾಡ್‍ಫಾದರ್ ಮೂಲಕ ಮುಂದಿನ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿಗೆ ಮುಂದಾಗಿದ್ದಾರೆ.  ಆದರೆ ಸತ್ಯನಾರಾಯಣ್ ಪ್ರತಿನಿಧಿಸುವ ಸಮುದಾಯದವರೇ ಆದ ಪ್ರಕಾಶನಗರ ವಾರ್ಡ್‍ನ ಜಿ.ಪದ್ಮಾವತಿ ಅವರಿಗೆ ಈಗಾಗಲೇ ಮೇಯರ್ ಗದ್ದುಗೆ ಲಭಿಸಿರುವುದರಿಂದ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಯಮಹಲ್ ವಾರ್ಡ್‍ನ ಗುಣಶೇಖರ್ ಅವರು ಕೆಎಂಸಿ ಕಾಯ್ದೆಯ ಬಗ್ಗೆ ಅಪಾರ ಪರಿಜ್ಞಾನ ಹೊಂದಿದ್ದಾರೆ. ಪಾಲಿಕೆಗೆ ಸಂಬಂಧಿಸಿದ ಯಾವುದೇ ವಿಚಾರಗಳ ಬಗ್ಗೆಯೂ ಗಂಟೆಗಟ್ಟಲೇ ಮಾತನಾಡುವ ಸಾಮಥ್ರ್ಯವೂ ಅವರಿಗಿದೆ.  ಕಾಂಗ್ರೆಸ್ ಹಿರಿಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿರುವ ಶಿವಾಜಿನಗರ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರ ಬಲಗೈ ಬಂಟರೆಂದೇ ಗುರುತಿಸಿಕೊಂಡಿರುವ ಗುಣಶೇಖರ್ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚು ಪ್ರತಿನಿಧಿಸುವ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಬಂದಿರುವ ಹಿನ್ನೆಲೆಯಲ್ಲಿ ಕೊನೆ ಮೇಯರ್ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಮೀಸಲಿಡುವಂತೆ ಒತ್ತಡ ಹೆಚ್ಚಾಗಿದೆ.

ಇತ್ತೀಚೆಗೆ ಬಿಬಿಎಂಪಿಯನ್ನು ಪ್ರತಿನಿಧಿಸುತ್ತಿರುವ 16 ಅಲ್ಪಸಂಖ್ಯಾತ ಸದಸ್ಯರು, ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ನೇತೃತ್ವದಲ್ಲಿ ಸಭೆ ನಡೆಸಿ ಕೊನೆ ಮೇಯರ್ ಸ್ಥಾನವನ್ನು ನಮಗೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನುಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.

ಹೀಗಾಗಿ ಮೇಯರ್ ಸ್ಥಾನಕ್ಕೆ ಗುರಪ್ಪನಪಾಳ್ಯ ವಾರ್ಡ್‍ನ ಮೊಹಮ್ಮದ್ ರಿಜ್ವಾನ್ ಅವರ ಹೆಸರು ಪ್ರಚಲಿತಕ್ಕೆ ಬಂದಿದೆ. ಒಟ್ಟಾರೆ ಕಾಂಗ್ರೆಸ್‍ನ ಈ ನಾಲ್ವರು ಹಿರಿಯ ಸದಸ್ಯರ ನಡುವೆ ಕೊನೆಯ ಮೇಯರ್ ಸ್ಥಾನಕ್ಕೆ ಪೈಫೋಟಿ ಏರ್ಪಟ್ಟಿದ್ದು, ಪಕ್ಷದ ಹೈಕಮಾಂಡ್ ಯಾವ ನಾಯಕರಿಗೆ ಮಣೆ ಹಾಕುವುದು ಕಾದು ನೋಡಬೇಕು.

ಬಿಜೆಪಿಗೂ ಆಸೆ: 198 ಸದಸ್ಯ ಬಲದ ಪಾಲಿಕೆಯಲ್ಲಿ 101 ಸ್ಥಾನ ಪಡೆದರೂ ಕಳೆದ ನಾಲ್ಕು ವರ್ಷಗಳಿಂದ ಮೇಯರ್ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಬಿಜೆಪಿ ಕಳೆದ ಲೋಕಸಭಾ ಚುನಾವಣೆ ನಂತರ ಮೇಯರ್ ಚುನಾವಣೆಯ ಮತಗಳ ಅಂತರವನ್ನು ಹೆಚ್ಚಿಸಿಕೊಂಡಿದ್ದು, ಹೇಗಾದರೂ ಮಾಡಿ ಕೊನೆಯ ಅವಧಿಯ ಮೇಯರ್ ಸ್ಥಾನವನ್ನು ದಕ್ಕಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂಬ ಮಾತುಗಳು ಹಲವಾರು ತಿಂಗಳುಗಳಿಂದ ಕೇಳಿಬರುತ್ತಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಅಲುಗಾಡಿಸಲು ಕೇಸರಿ ಪಾಳೆಯಕ್ಕೆ ಸಾಧ್ಯವಾಗಿಲ್ಲ.

ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೆ ಕೊನೆ ಮೇಯರ್ ಸ್ಥಾನವೂ ಬಿಜೆಪಿಗೆ ಒಲಿಯುವ ಸಾಧ್ಯತೆಗಳಿತ್ತು. ಮೇಯರ್ ಚುನಾವಣೆಯಲ್ಲಿ ನಿರ್ಣಾಯಕರೆನಿಸಿಕೊಂಡಿದ್ದ ಏಳು ಮಂದಿ ಪಕ್ಷೇತರರನ್ನು ತನ್ನತ್ತ ಸೆಳೆದರೆ ಅಧಿಕಾರದ ಗದ್ದುಗೆ ಹಿಡಿಯುವುದು ಬಿಜೆಪಿಗೆ ಸುಲಭವಾಗಿತ್ತು.  ಆದರೆ ರಾಜ್ಯ ಸರ್ಕಾರ ಪತನಗೊಳ್ಳದಿರುವ ಹಿನ್ನೆಲೆಯಲ್ಲಿ ಕೊನೆಯ ಅವಧಿಯ ಮೇಯರ್ ಸ್ಥಾನವೂ ಬಿಜೆಪಿಗೆ ಲಭಿಸುವ ಲಕ್ಷಣಗಳು ಕಂಡುಬರುತ್ತಿಲ್ಲ.

ಜನರು ನಗರದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಆರ್ಶೀವದಿಸಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್‍ನವರು ಅಪವಿತ್ರ ಮೈತ್ರಿ ಮಾಡಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ನಡೆಸಿದ್ದಾರೆ. ಕೊನೆಯ ಅವಧಿಯ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಪಕ್ಷ ನೀಡುವ ಆದೇಶಕ್ಕೆ ನಾವು ತಲೆ ಬಾಗುತ್ತೇವೆ ಎನ್ನುತ್ತಾರೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ.

Facebook Comments