“ಕೃಷಿ ಸಚಿವ ಬಿ.ಸಿ.ಪಾಟೀಲ್ ಅನ್ನದಾತರ ಕ್ಷಮೆ ಕೇಳಬೇಕು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ರೈತರನ್ನು ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ನೀಡಿರುವ ಹೇಳಿಕೆಗೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ.ಮಹೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅನ್ನದಾತರ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಟ್ವೀಟ್ ಮಾಡಿರುವ ಜೆಡಿಎಸ್‍ನ ಇಬ್ಬರು ಮಾಜಿ ಸಚಿವರು ಕೃಷಿ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೈತರ ಕಷ್ಟಗಳನ್ನು ಗೇಲಿ ಮಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡಲೇ ಅನ್ನದಾತರಲ್ಲಿ ಕ್ಷಮೆ ಕೋರಬೇಕು. ಇನ್ನು ಮುಂದೆ ಸಚಿವರು ಇಂತಹ ವರ್ತನೆಗಳಿಗೆ ಕಡಿವಾಣ ಹಾಕಿಕೊಳ್ಳಬೇಕು ಎಂದು ಟ್ವಿಟರ್‍ನಲ್ಲಿ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ಈ ಹಿಂದೆಯೂ ರೈತರ ಬಗ್ಗೆ ಇದೇ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನು ನೀಡಿದ್ದರು. ಈಗಲೂ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಗಳ ಸುಳಿಗೆ ಸಿಕ್ಕಿ ಮಾನಸಿಕವಾಗಿ ಕುಗ್ಗಿಹೋಗಿರುವ ರೈತರೇ ಆತ್ಮಹತ್ಯೆ ಮಾಡಿಕೊಳ್ಳುವುದು.

ಜನಪ್ರತಿನಿಗಳು ಎನಿಸಿಕೊಂಡ ಅದರಲ್ಲೂ ಕೃಷಿ ಇಲಾಖೆ ನೇತೃತ್ವ ವಹಿಸಿಕೊಂಡಿರುವವರಿಗೆ, ರೈತನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಸಂಕಷ್ಟದಿಂದ ಪಾರು ಮಾಡಬೇಕಾದ ಹೊಣೆಗಾರಿಕೆಯಿದೆ. ಅದನ್ನು ಬಿಟ್ಟು ಜೀವ ತೊರೆದ ರೈತರನ್ನು ಸಾವಿನ ನಂತರವೂ ಗೇಲಿ ಮಾಡುವುದು ವಿಕೃತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಸಿದ ರೈತನಿಗೆ ಶಕ್ತಿ ತುಂಬುವುದನ್ನು ಬಿಟ್ಟು ಅವನನ್ನು ಮಾನಸಿಕ ದುರ್ಬಲ ಎಂದು ಅಣಕಿಸುವುದು ಕೂಡ ದುರ್ಬಲ ಮನಸ್ಸುಗಳ ವರ್ತನೆಯೇ ಆಗಿದೆ. ಬಿ.ಸಿ.ಪಾಟೀಲರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃಷಿ ರಂಗದ ಅಭಿವೃದ್ಧಿಯತ್ತ ಗಮನಹರಿಸಬೇಕೆ ಹೊರತು ಸುಪ್ತವಾಗಿರುವ ಮಾನಸಿಕ ದೌರ್ಬಲ್ಯವನ್ನು ಇನ್ನೊಬ್ಬರ ಮೇಲೆ ತೋರಿಸುತ್ತಾ ಹೋಗಬಾರದೆಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಸಾ.ರಾ.ಮಹೇಶ್ ಟ್ವೀಟ್ ಮಾಡಿ, ಬಿ.ಸಿ.ಪಾಟೀಲ್ ಮೊದಲು ರೈತರ ಕ್ಷಮೆ ಕೋರಬೇಕು. ಕೃಷಿ ಇಲಾಖೆ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸ್ಪಷ್ಟನೆ ನೀಡಬೇಕು. ಸರ್ಕಾರದ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಒಂದು ವೇಳೆ ಭ್ರಷ್ಟಾಚಾರ ಸಾಬೀತಾದರೆ ಮುಲಾಜಿಲ್ಲದೆ ಮಂತ್ರಿ ಮಂಡಲದಿಂದ ಬಿ.ಸಿ.ಪಾಟೀಲರನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವರು ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ರೈತನ ಸಂಕಷ್ಟ ಪರಿಸ್ಥಿತಿಯಲ್ಲಿ ಗೇಲಿ ಮಾಡುವ ಬಿ.ಸಿ.ಪಾಟೀಲ್ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆಯದು ಮಾಡಿ ಅದನ್ನು ಬಿಟ್ಟು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಸಚಿವರು, ಅಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿಯವರೊಂದಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ ಎಂದು ಉಲ್ಲೇಖಿಸಿರುವ ಮಹೇಶ್, ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ, ಇದು ಎಂಥ ದೌರ್ಬಲ್ಯ ಎಂದು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin