ಹಾವೇರಿ ಜಿಲ್ಲೆ ಲೆಕ್ಕಕ್ಕೇ ಇಲ್ವಾ..? : ಕೌರವ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

B C patilಹಾವೇರಿ,ಡಿ.22- ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾಂತ್ಯವಾರು ವಿಚಾರದಲ್ಲಿ ಹಾವೇರಿ ಜಿಲ್ಲೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ತಾವು ಏಕೈಕ ಶಾಸಕನಾಗಿದ್ದು, ಈ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ ಇದೀಗ ಎಲ್ಲವೂ ಹುಸಿಯಾಗಿದೆ ಎಂದು ಅಸಮಾಧಾನಗೊಂಡರು.

ಗದಗ, ಹಾವೇರಿ, ಧಾರವಾಡದಲ್ಲಿ ತಾವು ಏಕೈಕ ಸಾದರ ಲಿಂಗಾಯತ ಶಾಸಕನಾಗಿದ್ದೇನೆ. ಕಾಂಗ್ರೆಸ್ ವಿರೋಧಿ ಅಲೆಯಿದ್ದಾಗಲೂ ಪಕ್ಷ ಗೆದ್ದಿದೆ. ಆದರೆ ಇದೇ ಮೊದಲ ಬಾರಿಗೆ ಸಾದರ ಲಿಂಗಾಯತರನ್ನು ಹೊರಗಿಟ್ಟು ಸಚಿವ ಸಂಪುಟ ರಚಿಸಲಾಗಿದೆ ಎಂದರು.

ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಪಾರವಾಗಿ ನಂಬಿದ್ದೆ. ಅವರೇ ನಮಗೆ ಗಾಡ್ ಫಾದರ್. ಅವರು ಮನಸ್ಸು ಮಾಡಿದ್ದರೆ ನನಗೆ ಮಂತ್ರಿ ಸ್ಥಾನ ಕೊಡಿಸಬಹುದಿತ್ತು. ಇದೀಗ ಎಲ್ಲಾ ನಂಬಿಕೆ, ಭರವಸೆಗಳು ಹುಸಿಯಾಗಿದೆ ಎಂದು ಹೇಳಿದರು. ಮುಂದಿನ ನಡೆ ಬಗ್ಗೆ ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲಾಗದು. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವೆ. ಅಲ್ಲಿಯವರೆಗೂ ಕಾದು ನೋಡಿ ಎಂದರು.

# ನನಗೆ ತೀವ್ರ ಬೇಸರವಾಗಿದೆ : ಆರ್.ಶಂಕರ್
ಬೆಂಗಳೂರು, ಡಿ.22- ಸಂಪುಟದಿಂದ ಕೈಬಿಟ್ಟಿದ್ದಕ್ಕೆ ನನಗೆ ತೀವ್ರ ಬೇಸರವಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್.ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ನಿಂತಿದ್ದೆ.  ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಹೇಳಿದ್ದರೂ ಕೂಡ ನನ್ನ ಗಮನಕ್ಕೆ ಬಾರದೆ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ನನಗೆ ಬೇಸರವಾಗಿದೆ. ನಾನು ಅರಣ್ಯ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಸರ್ಕಾರ ರಚನೆ ಸಂದರ್ಭದಲ್ಲಿ ಕೈ ಹಿಡಿದಿದ್ದೇನೆ. ಬೆಂಬಲ ನೀಡಿದ ನನ್ನನ್ನು ದೂರ ಇಟ್ಟಿರುವುದು ಎಷ್ಟು ಸರಿ? ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿ ಮಾಡಿಲ್ಲ.

ನನ್ನನ್ನು ಏಕೆ ಸಂಪುಟದಿಂದ ಕೈ ಬಿಟ್ಟಿದ್ದಾರೆ ಎಂದು ಕೇಳುತ್ತೇನೆ. ಸಂಪುಟದಿಂದ ಕೈಬಿಟ್ಟ ಬಗ್ಗೆ ನನಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದರು. ನನ್ನ ಮುಂದಿನ ನಡೆ ಬಗ್ಗೆ ನಾನು ಈಗಲೇ ಏನೂ ಹೇಳುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸಕಾರಣ ನೀಡಬೇಕು ಎಂದರು.

Facebook Comments