“ಕುಮಾರಸ್ವಾಮಿ ಊಸರವಳ್ಳಿಯಿದ್ದಂತೆ, ಆಗಾಗ ಬಣ್ಣ ಬದಲಿಸುತ್ತಾರೆ” : ಬಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಸೆ.8-ಡ್ರಗ್ಸ್ ಮಾಫಿಯಾ ಹಣದಿಂದಲೇ ಮೈತ್ರಿ ಸರ್ಕಾರ ಪತನವಾಯಿತೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ರೀತಿ ಆರೋಪಿಸುತ್ತಿರುವ ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಿಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ.

ಕುಮಾರಸ್ವಾಮಿ ಆಗಾಗ ಊಸರವಳ್ಳಿಯಂತೆ ಬಣ್ಣಬದಲಾಯಿಸುತ್ತಿರುತ್ತಾರೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿಯಾಗಿದ್ದವರು ಅವರು, ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ ಎಂದಿದ್ದಾರೆ.

ಮೈಸೂರಿನಲ್ಲಿ ಪ್ರಗತಿಪರಿಶೀಲನಾ ಸಭೆಗೆ ತೆರಳುವ ಮುನ್ನ ಮದ್ದೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ವಿರೋಧ ಪಕ್ಷಗಳ ಊಹಾಪೋಹದ ಆರೋಪಗಳಿಗೆಲ್ಲ ಉತ್ತರಿಸಬೇಕಾಗಿಲ್ಲ.

ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರು ಯಾರೇ ಇರಲೀ ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದೆ ಎಂದರು. ತಾವು ಮೈಸೂರಿಗೆ ಭೇಟಿ ನೀಡುತ್ತಿದ್ದು,ಅಲ್ಲಿನ ಕೃಷಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದಾಗಿ ಹೇಳಿದರು.

ರಸಗೊಬ್ಬರವಾಗಲೀ ಯೂರಿಯಾದ ಕೊರತೆಯಾಗಲಿ ಇಲ್ಲ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಅಂಥವರ ವಿರುದ್ಧ ಕ್ರಮವನ್ನೂ ಜರುಗಿಸಿ ಪರವಾನಿಗೆ ರದ್ದುಮಾಡಲಾಗುತ್ತಿದೆ.‌ ರೈತರಿಗಾಗಲೀ ಕೃಷಿ ಚಟುವಟಿಕೆಗಳಿಗಾಗಲೀ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.‌

ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಬಿತ್ತನೆಯಾಗಿದೆ.‌ ಮಂಡ್ಯ ಸೇರಿದಂತೆ ಸುತ್ತಮುತ್ತಲ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆಗೂ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin