ಬಿಸಿಎ ವಿದ್ಯಾರ್ಥಿ ಕಿಡ್ನಾಪ್ ಪ್ರಕರಣ : 6 ಅಪಹರಣಕಾರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಬಿಸಿಎ ವಿದ್ಯಾರ್ಥಿಯನ್ನು ಅಪಹರಿಸಿ ಆತನ ಪೋಷಕರಿಂದ 45 ಸಾವಿರ ಹಣ ಪಡೆದು ಪರಾರಿಯಾಗಿದ್ದ 6 ಅಪಹರಣಕಾರರನ್ನು ಬಂಧಿಸುವಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರ್.ಪ್ರಜ್ವಲ್, ಅನಿಲ್‍ಕುಮಾರ್, ದೀಪು ಸೇರಿದಂತೆ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ 6 ಅಪಹರಣಕಾರರನ್ನು ಬಂಧಿಸಲಾಗಿದೆ.

ಆಟೋ ಚಾಲಕನ ಪುತ್ರನಾಗಿರುವ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗದ ಜತೆಗೆ ಪಾರ್ಟ್‍ಟೈಮ್ ಕೆಲಸ ಮಾಡಿಕೊಂಡಿದ್ದಾರೆ. ತನ್ನ ಸಂಪಾದನೆಯಿಂದ ಕಾರು ಖರೀದಿಸಿದ್ದ ಅಭಿಷೇಕ್, ಕಾರಿನಲ್ಲಿ ಕಾಲೇಜಿಗೆ ತೆರಳುವಾಗ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಸಮೀಪ ಕಾರನ್ನು ತಡೆದ ಆತನ ಮೂವರು ಸಹಪಾಠಿಗಳು ತನ್ನ ಇತರ ಮೂವರು ಸಹಚರರೊಂದಿಗೆ ಆತನನ್ನು ಅಪಹರಿಸಿದ್ದರು.

ಅಭಿಷೇಕ್‍ನನ್ನು ಸುಂಕದಕಟ್ಟೆ , ನೆಲಮಂಗಲ ಮತ್ತು ದಾಬಸ್‍ಪೇಟೆಯಲ್ಲಿ ಸುತ್ತಾಡಿಸಿ ಕೊನೆಗೆ ನೆಲಮಂಗಲ-ದಾಬಸ್‍ಪೇಟೆ ಮಾರ್ಗಮಧ್ಯೆ ಕಾರು ನಿಲ್ಲಿಸಿ ಸ್ಟಾಂಪ್‍ಪೇಪರ್ ಮೇಲೆ 10 ಲಕ್ಷ ನೀಡಬೇಕೆಂಬ ಒಕ್ಕಣೆ ಬರೆಸಿಕೊಂಡು ಅಭಿಷೇಕ್‍ನಿಂದ ಬಲವಂತವಾಗಿ ಸಹಿ ಹಾಕಿಸಿಕೊಂಡು ಆತನ ಬಳಿ ಇದ್ದ 50 ಸಾವಿರ ರೂ.ನಗದು ಕಿತ್ತುಕೊಂಡಿದ್ದರು.

ನಂತರ ಅಲ್ಲಿಂದಲೇ ಅಭಿಷೇಕ್ ತಂದೆಗೆ ದೂರವಾಣಿ ಕರೆ ಮಾಡಿ ನಿಮ್ಮ ಮಗ ನಮಗೆ 10 ಲಕ್ಷ ನೀಡಬೇಕು. ಈ ಕೂಡಲೇ ಒಂದು ಲಕ್ಷ ರೂ.ಗಳನ್ನು ನಮ್ಮ ಖಾತೆಗೆ ವರ್ಗಾಯಿಸುವಂತೆ ಧಮ್ಕಿ ಹಾಕಿದ್ದರು. ಮಗನ ಅಪಹರಣದಿಂದ ಆಘಾತಕ್ಕೊಳಗಾದ ಆಟೋ ಚಾಲಕ ತಮ್ಮ ಬಳಿ ಇದ್ದ ಚಿನ್ನದ ಸರ ಅಡವಿಟ್ಟು 45 ಸಾವಿರ ರೂ.ಗಳನ್ನು ಅಪಹರಣಕಾರರ ಖಾತೆಗೆ ವರ್ಗಾಯಿಸಿದ್ದರು.

45 ಸಾವಿರ ರೂ. ತಮ್ಮ ಖಾತೆಗೆ ವರ್ಗಾವಣೆಯಾಗುತ್ತಿದ್ದಂತೆ ಅಭಿಷೇಕ್‍ನನ್ನು ಅಲ್ಲೇ ಬಿಟ್ಟು ವಿಷಯ ಯಾರಿಗಾದರೂ ತಿಳಿಸಿದರೆ ಸರಿಯಿರುವುದಿಲ್ಲ ಎಂದು ಎಚ್ಚರಿಕೆ ನೀಡಿ ಪರಾರಿಯಾಗಿದ್ದರು. ಅಪಹರಣಕಾರರಿಂದ ಬಚಾವಾಗಿ ಮನೆಗೆ ಬಂದ ಅಭಿಷೇಕ್ ತನ್ನ ತಂದೆಯೊಂದಿಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಇನ್ಸ್‍ಪೆಕ್ಟರ್ ಲೋಹಿತ್ ನೇತೃತ್ವದ ತಂಡ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ. ಬಂತರಿಂದ 80ಸಾವಿರ ರೂ.ನಗದು, ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದ ಸ್ಟಾಂಪ್‍ಪೇಪರ್, ಚಿನ್ನದ ಸರ ಹಾಗೂ ಚಾಕು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments