ಐಪಿಎಲ್ ಮೇಲೆ ಕರೋನಾ ಕರಿನೆರಳು, ದಾದಾ ಹೇಳಿದ್ದೇನು ಗೊತ್ತೇ…!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜ.9- ಷೇರು ಪೇಟೆ, ಚಿತ್ರರಂಗದ ಮೇಲೆ ತನ್ನ ಪ್ರಭಾವ ಬೀರಿದ್ದ ಕರೋನಾ ವೈರಸ್ ಎಂಬ ಮಹಾಮಾರಿ ಈಗ ಕ್ರಿಕೆಟ್ ಲೋಕಕ್ಕೂ ಅಡ್ಡಿ ಉಂಟು ಮಾಡಲು ಸಜ್ಜಾಗಿದೆ.ದೇವರ ನಾಡೆಂದೇ ಬಿಂಬಿಸಿಕೊಂಡಿರುವ ಕೇರಳದಲ್ಲಿ ಕೊರೊನಾದ ವೈರಸ್‍ಗಳ ಲಕ್ಷಣಗಳು ಕಂಡುಬರುತ್ತಿರುವುದರಿಂದ ಕೇರಳದ ಆಟಗಾರರು ಐಪಿಎಲ್‍ನಲ್ಲಿ ಪಾಲ್ಗೊಂಡರೆ ಅಥವಾ ಈ ರಾಜ್ಯದಲ್ಲಿರುವ ಕೆಲವು ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಿದರೆ ಕರೊನಾ ವೈರಸ್ ಇಡೀ ದೇಶವನ್ನೇ ವ್ಯಾಪಿಸುವ ಆತಂಕವಿರುವುದರಿಂದ ಐಪಿಎಲ್ ಪಂದ್ಯಾವಳಿಗಳ ದಿನಾಂಕವನ್ನು ಮುಂದೂಡಲಾಗುವುದು ಎಂಬ ವದಂತಿಗಳು ಕೂಡ ಕೇಳಿಬರುತ್ತಿದೆ.

ಐಪಿಎಲ್‍ನಲ್ಲಿ ಕೇರಳದ ಕೆಲ ಆಟಗಾರರು ಕೂಡ ಪ್ರಮುಖ ತಂಡಗಳಲ್ಲಿ ಗುರುತಿಸಿಕೊಂಡಿರುವುದರಿಂದ ಈ ಆಟಗಾರರ ಮೇಲೂ ನಿಗಾ ಇಡಲಾಗುವುದು ಎಂಬ ಸುದ್ದಿಗಳು ಕೂಡ ಕೇಳಿಬರುತ್ತಿದೆ. ಕೇರಳದ ಆಟಗಾರರಾದ ಸಂಜು ಸಮ್ಸನ್, ಪ್ರಶಾಂತ್ ಪರಮೇಶ್ವರನ್, ಸಂದೀಪ್ ವಾರಿಯರ್ ಅವರು ಈ ಬಾರಿಯ ಐಪಿಎಲ್‍ನಲ್ಲಿ ಭಾಗಿಯಾಗಿದ್ದಾರೆ.

ಅಲ್ಲದೆ ಕೆಲವು ಪಂದ್ಯಗಳು ಕೇರಳದ ತಿರುವನಂತಪುರ ಕ್ರಿಕೆಟ್ ಸ್ಟೇಡಿಯಂನಲ್ಲೂ ಆಯೋಜಿಸಿರುವುದರಿಂದ ಈ ಪಂದ್ಯಗಳನ್ನು ವೀಕ್ಷಿಸಲು ಬರುವವರಲ್ಲಿ ಯಾರಿಗಾದರೂ ಕರೊನಾ ಸೋಂಕು ಇದ್ದರೆ ಇತರರಿಗೂ ಹರಡುವ ಭೀತಿಯಿಂದ ಐಪಿಎಲ್ ಪಂದ್ಯಾವಳಿಗಳನ್ನೇ ಮುಂದೂಡಲು ಅಂದಾಜಿಸಲಾಗಿದೆ.

ಕೇರಳದಲ್ಲಿ ಕರೊನಾ ವೈರಸ್‍ನಿಂದ ಆಗಿರುವ ಅನಾಹುತ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ಸಂಜೆ ಮಹಾರಾಷ್ಟ್ರದ ಆರೋಗ್ಯ ಮಂತ್ರಿ ರಾಜೇಶ್ ತೋಪೆಯವರು ನಡೆಸುವ ಸಭೆಯಲ್ಲಿ ಐಪಿಎಲ್‍ನ ಭವಿಷ್ಯ ನಿರ್ಧಾರವಾಗಲಿದೆ.ದೇಶದಲ್ಲಿ ಈಗಾಗಲೇ 42 ಕರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು ದೆಹಲಿ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರಗಳಲ್ಲೂ ಕರೊನಾ ವೈರಸ್ ಕಾಣಿಸಿಕೊಂಡಿದೆ.

# ನಿಗದಿತ ಸಮಯಕ್ಕೆ ಐಪಿಎಲ್:ದಾದಾ :
ಕರೊನಾ ಭೀತಿಯಿಂದ ಈ ಬಾರಿಯ ಐಪಿಎಲ್ ಪಂದ್ಯಗಳು ಮುಂದೂಡಲಿದೆ ಎಂಬ ವದಂತಿಗಳು ಕೇಳಿಬರುತ್ತಿದೆಯಾದರೂ ನಿಗದಿತ ಸಮಯಕ್ಕೆ ಐಪಿಎಲ್ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಪಂಚದ ಅತ್ಯಂತ ಕ್ರಿಕೆಟ್ ಹಬ್ಬವೆಂದೇ ಗುರುತಿಸಿಕೊಂಡಿರುವ ಐಪಿಎಲ್ ಮಹಾಜಾತ್ರೆ ನಡೆಸಲು ಬಿಸಿಸಿಐ ಈಗಾಗಲೇ ತಯಾರಿ ನಡೆಸಿದೆ, ಈಗ ಕರೋನಾ ವೈರಸ್ ಕಾಟ ಎದುರಾಗಿರುವುದರಿಂದ ಅದರ ಬಗ್ಗೆ ಚಿತ್ತ ಹರಿಸಿದ್ದು, ವಿದೇಶಗಳಿಂದ ಬರುವ ಆಟಗಾರರು, ಫ್ರಾಂಚೈಸಿಗಳು, ಐಪಿಎಲ್ ವೀಕ್ಷಿಸಲು ಬರುವ ವಿದೇಶಿಗಳ ಬಗ್ಗೆಯೂ ಜಾಗೃತೆ ವಹಿಸುವ ಜವಾಬ್ದಾರಿಯೂ ಬಿಸಿಸಿಐ ಮೇಲೆಯೇ ಬಿದ್ದಿದೆ ಎಂದು ಗಂಗೂಲಿ ಹೇಳಿದ್ದಾರೆ.

ಐಪಿಎಲ್ 2020ರ ಆವೃತ್ತಿಯು ಮಾರ್ಚ್ 29 ರಂದು ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲು ನಿಶ್ಚಯಿಸಿದೆ.  ಇಂದು ಸಂಜೆ ಆರೋಗ್ಯ ಸಚಿವರೊಂದಿಗೆ ನಡೆಯುವ ಸಭೆಯ ನಂತರವಷ್ಟೇ ಐಪಿಎಲ್ ಅನ್ನು ನಿಗದಿತ ಸಮಯಕ್ಕೆ ನಡೆಸಬೇಕೇ? ಅಥವಾ ಮುಂದೂಡಬೇಕೆ ಎಂಬ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ದಾದಾ ಹೇಳಿದ್ದಾರೆ.

Facebook Comments

Sri Raghav

Admin