ದೆಹಲಿಯಲ್ಲಿ ಡಿವಿಎಸ್ ಭೇಟಿಯಾದ ಬಿ.ಸಿ.ಪಾಟೀಲ್ : ರಾಜ್ಯಕ್ಕೆ ಅಗತ್ಯ ಗೊಬ್ಬರ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.27- ಕರ್ನಾಟಕಕ್ಕೆ ಅವಶ್ಯಕ ಗೊಬ್ಬರವನ್ನು ಪೂರೈಸಲು ಕೇಂದ್ರ ರಾಸಾಯನಿಕ, ರಸಗೊಬ್ಬರ ಸಚಿವ ಸದಾನಂದಗೌಡ ಅವರು ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸಿದ್ದಾರೆ. ನವದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಕೃಷಿ ಸಚಿವ ಬಿ.ಸಿ.ಪಾಟೀಲ್ ರೊಂದಿಗಿನ ಸಮಾಲೋಚನೆ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯದ ಅವಶ್ಯಕತೆಗಿಂತಲೂ ಹೆಚ್ಚಿನ ರಸಗೊಬ್ಬರವನ್ನು ಪೂರೈಸಿದ್ದು, ಮುಂದಿನ ದಿನಗಳಲ್ಲೂ ಸಹ ರಸಗೊಬ್ಬರದ ಕೊರತೆಯಾಗುವುದಿಲ್ಲ ಎಂದು ಬಿ.ಸಿ.ಪಾಟೀಲ್ ಅವರಿಗೆ ಡಿವಿಎಸ್ ಭರವಸೆ ನೀಡಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿರುವುದಲ್ಲದೇ ಕೋವಿಡ್‍ನಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿಯೆಡೆಗೆ ರೈತಾಪಿವರ್ಗದ ಜೊತೆಗೆ ಯುವಜನತೆ ಹೆಚ್ಚು ಒತ್ತು ನೀಡಿರುವುದರಿಂದ ಈ ಬಾರಿ ಬಿತ್ತನೆಯೂ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲರು ಕೇಂದ್ರ ಸಚಿವರಿಗೆ ಮಾಹಿತಿ ಒದಗಿಸಿದ್ದಾರೆ.

ಕೃಷಿಗೆ ರಸಗೊಬ್ಬರ ಹೆಚ್ಚಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಗೂ ಯೂರಿಯಾ ಕೊರತೆಯಾಗದಂತೆ ಕೈಗೊಂಡಿರುವ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ.

ನಕಲಿ ಬೀಜ ತಡೆ, ನಕಲಿ ರಾಸಾಯನಿಕ ಗೊಬ್ಬರ ಜಾಲವನ್ನು ಬೇಸುವಲ್ಲಿ ಕೃಷಿ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಕಲಿ ಬೀಜ ರಾಸಾಯನಿಕ ಗೊಬ್ಬರ ಹಾಗೂ ಕೃತಕ ಅಭಾವ ಸೃಷ್ಟಿಸುವವರ ಪರವಾನಿಗೆ ರದ್ದುಗೊಳಿಸುವ ಬಗ್ಗೆಯೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರಸಚಿವರ ಜೊತೆ ಮಾಹಿತಿ ಹಂಚಿಕೊಂಡರು. ಕೃಷಿ ಸಚಿವರ ಈ ದಿಟ್ಟ ಕ್ರಮ ಹಾಗೂ ರೈತರ ಬಗೆಗಿನ ಕಾಳಜಿಗೆ ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin