ಬಿಡಿಎಗೆ ವಂಚನೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಬಿಡಿಎ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವ ಬಡಾವಣೆಗಳಿಗೆ ಭೂಮಿ ನೀಡಿ ಪರಿಹಾರ ಪಡೆದವರು ಅದೇ ದಾಖಲೆ ಆಧಾರದಲ್ಲಿ ಮತ್ತೊಮ್ಮೆ ಪರಿಹಾರ ತೆಗೆದುಕೊಂಡು ವಂಚಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

ಹಿರಿಯ ಅಧಿಕಾರಿಗಳ ಸಭೆಯಲ್ಲಿಂದು ಮಾತನಾಡಿದ ಅವರು, ಪರಿಹಾರ ವಿಚಾರದಲ್ಲಿ ವಂಚನೆ ಮಾಡುವವರಿಗೆ ಸಹಕಾರ ನೀಡುವ ಬಿಡಿಎ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಬದಲಿ ನಿವೇಶನಗಳು, ಖಾಲಿ ಇರುವ ನಿವೇಶನಗಳು ಮತ್ತು ಬಿಡಿಎ ಆಸ್ತಿ ವಿಚಾರ ಮುಚ್ಚಿಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ಅಲ್ಲದೆ, ಬಿಡಿಎ ಸ್ವಾಧೀನಕ್ಕೆ ಒಳಪಟ್ಟ ಬಡಾವಣೆಗಳಲ್ಲಿ ಮನೆ ಅಥವಾ ಬಡಾವಣೆ ನಿರ್ಮಾಣಕ್ಕೆ ಇಂತಹ ವಂಚಕರಿಗೆ ಅವಕಾಶ ಕೊಡುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಸಭೆಯಲ್ಲಿ ಬಿಡಿಎ ಆಯುಕ್ತ ಡಾ.ಎಚ್.ಆರ್. ಮಹದೇವ್ ಮತ್ತಿತರ ಉನ್ನತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments