ಬಿಡಿಎ ಸೈಟ್ ಗೋಲ್ ಮಾಲ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಲೇಔಟ್‍ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ರಮೇಶ್ ಬಂಧಿತ ಆರೋಪಿ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ಈ ಸಂಜೆಗೆ ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಸರನ್ನು ದುರುಪಯೋಗಪಡಿಸಿಕೊಂಡು ಕೆಂಪೇಗೌಡ ಲೇಔಟ್‍ನ ನಿವೇಶನಗಳ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಲಾಗಿದ್ದು, ಪ್ರಮುಖ ಆರೋಪಿ ವಿಜಯಾನಂದ ಸ್ವಾಮಿ ಎಂಬಾತನನ್ನು ಬಂಧಿಸಿ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈ ವಂಚನೆ ಪ್ರಕರಣದಲ್ಲಿ ಇನ್ನೂ ಹಲವರಿದ್ದು, ಇವರಿಗಾಗಿ ಶೇಷಾದ್ರಿಪುರಂ ಪೊಲೀಸರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗೃತ ದಳದ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ವಿಜಯಾನಂದಸ್ವಾಮಿ ಎಂಬಾತ ಬಿಡಿಎ ಹೆಸರಿನಲ್ಲಿ ನಿವೇಶನಗಳ ನಕಲಿ ಹಂಚಿಕೆ ಪತ್ರ ತಯಾರಿಸುತ್ತಿದ್ದ. ನಕಲಿ ರಬ್ಬರ್‍ಸ್ಟಾಂಪ್ ಹಾಗೂ ಪ್ರಾಧಿಕಾರದ ಆಯುಕ್ತರ ನಕಲಿ ಸಹಿಯನ್ನೂ ಬಳಸಿದ್ದ. ಈ ರೀತಿ ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ನಿವೇಶನದ ನಕಲಿ ಹಕ್ಕುಪತ್ರಗಳನ್ನು ನೀಡಿ 50 ಸಾವಿರದಿಂದ 3 ಲಕ್ಷವರೆಗೆ ಹಣ ವಸೂಲಿ ಮಾಡಿದ್ದ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

15 ಸಾವಿರ ಪಡೆದು ಒಂದು ಸಾವಿರ ಜನರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಂಡಿದ್ದ. 3 ಸಾವಿರ ಜನರನ್ನು ಸದಸ್ಯರನ್ನಾಗಿಸಿಕೊಳ್ಳುವ ಯೋಜನೆ ಇತ್ತು ಎಂದು ಪ್ರಮುಖ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಈ ಜಾಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವ ಶೇಷಾದ್ರಿಪುರಂ ಪೊಲೀಸರು ಇನ್ನಿತರ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Facebook Comments